

ಚಿಕ್ಕಬಳ್ಳಾಪುರ: ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದ ವಚನಕ್ರಾಂತಿಯ ನೇತಾರ ಬಸವಣ್ಣರ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತವಾದುದು ಎಂದು ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಹಳೇ ಬಸವನಗುಡಿ ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಕೈಗೊಂಡಿದ್ದ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವವನ್ನು ಉದ್ಘಾಟಸಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಸಮಾಜವನ್ನು ಕಾಡುತ್ತಿದ್ದ ಹಲವು ಅನಿಷ್ಟ ಪದ್ಧತಿಗಳ ವಿರುದ್ಧ ಕ್ರಾಂತಿಕಾರಿ ಚಿಂತನೆಗಳ ಮೂಲಕ ಹೋರಾಡಿದ ಬಸವಣ್ಣ 1400 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಜಾತಿ, ಲಿಂಗ ಮತ್ತು ವರ್ಗ ತಾರತಮ್ಯಗಳ ವಿರುದ್ಧ ದನಿಯಿದೆ ಎಂದರು.
ಶ್ರೇಷ್ಠ ಸಮಾಜ ಸುಧಾರಕ ಬಸವಣ್ಣ ಅನುಭವ ಮಂಟಪದಲ್ಲಿ ಸಮಾಜದ ಎಲ್ಲ ವರ್ಗಗಳನ್ನು ಸೇರಿಸಿ ಆರೋಗ್ಯಕರ ವೈಚಾರಿಕ ಚರ್ಚೆಗಳ ಮೂಲಕ ಸಮಸಮಾಜದ ಸುಧಾರಣೆಗೆ ನಾಂದಿ ಹಾಡಿದರು. ನೈಜ ಭಕ್ತಿ, ಆಧ್ಯಾತ್ಮಗಳ ವಿಚಾರಗಳನ್ನು ಪ್ರಖರ ವೈಚಾರಿಕ ದೃಷ್ಟಿಷ್ಟಿಕೋನದ ಸ್ಪರ್ಶ ನೀಡಿದರು ಎಂದರು.
ಶಾಂತಿ, ಸಹಬಾಳ್ವೆ ಮತ್ತು ಸಮಾನತೆಯ ತತ್ವಗಳನ್ನೊಳಗೊಂಡ ವಚನಗಳು ಸಮಾಜಕ್ಕೆ ಉತ್ತಮ ಮಾರ್ಗದರ್ಶಕ. ಇವುಗಳ ಸಂದೇಶಗಳನ್ನು ಎಲ್ಲೆಡೆ ಪಸರಿಸುವಂತೆ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯೂ ವಚನಕಾರರ ತತ್ವಾದರ್ಶಗಳನ್ನು ಪಾಲಿಸಬೇಕು. ಆಗ ಮಾತ್ರ ಮಹನೀಯರಿಗೆ ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ರಾಜ್ಯ ಮಾವು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು ಮಾತನಾಡಿ, ಜಾತೀಯತೆಯ ಪಿಡುಗನ್ನು ಹೋಗಲಾಡಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಸಮ ಸಮಾಜದ ನಿರ್ಮಾಣಕ್ಕೆ ರಾಜ್ಯದಲ್ಲಿ ಮುನ್ನುಡಿ ಬರೆದ ವಚನ ಕ್ರಾಂತಿಯ ಬಸವಣ್ಣನವರ ವಚನಗಳು ಇಂದಿನ ಸಮಾಜಕ್ಕೆ ದಾರಿ ದೀಪವಾಗಬೇಕು ಎಂದರು.
ನಗರಸಭೆಯ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಮಾತನಾಡಿ, ಸಮಾನತೆಯ ಹರಿಕಾರ ಬಸವಣ್ಣನವರ ವಚನಗಳು ಸಾರ್ವತ್ರಿಕ ಅಧ್ಯಯನಕ್ಕೆ ಮುಖ್ಯವಾಗಿ ಇಂದಿನ ಯುವ ಜನತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬಸವಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಬಿ.ಸದಾಶಿವ ಮಾತನಾಡಿ, ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಸಮಾನ ಚಿಂತನೆಯುಳ್ಳ ಮಹಾನ್ ಸುಧಾರಕರು. ಬಸವಣ್ಣನವರು ಅಸಮಾನತೆಯ ವಿರುದ್ಧದ ಹೋರಾಟಗಾರರಾಗಿ ಹಗಲಿರುಳು ಶ್ರಮಿಸಿದರು. ಮಂತ್ರಿಯಾಗಿ ಗಮನಸೆಳೆಯುವ ಅಧಿಕಾರವಿದ್ದರೂ ಹಣದ ಹಿಂದೆ ಹೋಗದೇ ನಿಜವಾದ ಆಧ್ಯಾತ್ಮದೊಂದಿಗೆ ಮಾನವೀಯ ಮೌಲ್ಯಗಳನ್ನು ಸಮೀಕರಿಸಿ ಎಲ್ಲ ಸಮುದಾಯಗಳನ್ನು ಮುನ್ನಡೆಸಿದರು ಎಂದು ತಿಳಿಸಿದರು.
ನಗರಸಭೆ ಸದಸ್ಯ ಯತೀಶ್, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಗಿರೀಶ್, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ರೇಣುಕಾಪ್ರಸಾದ್ ಬಾಬು, ಉಪಾಧ್ಯಕ್ಷ ಕಿರಣ್, ಮಹಿಳಾ ಘಟಕದ ಅಧ್ಯಕ್ಷೆ ಉಮಾ ಸುರೇಶ್, ಉಪಾಧ್ಯಕ್ಷೆ ಗೀತಾ, ಸಮುದಾಯದ ಮುಖಂಡರಾದ ಪರಶಿವಮೂರ್ತಿ, ಗುಬ್ಬಿ ಶೆಟ್ಟಿ ಮತ್ತಿತರರು ಇದ್ದರು.
ಬಸವಣ್ಣನಿಗೆ ಪುಷ್ಪ ನಮನ:ಬಸವ ಜಯಂತಿ ಅಂಗವಾಗಿ ಹಳೇ ಬಸವನ ಗುಡಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರವನ್ನು ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಬಸವಣ್ಣ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ವಚನಕಾರರ ವಚನಗಳ ಗಾಯನದೊಂದಿಗೆ ಅರ್ಥವನ್ನು ಸಭಿಕರಿಗೆ ವಿವರಿಸಲಾಯಿತು.