

ಚಿಕ್ಕೋಡಿ: ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ, ಸ್ತ್ರೀ ಶೋಷಣೆ, ಮೌಢ್ಯ, ವರ್ಣ, ವರ್ಗ ತಾರತಮ್ಯದಿಂದ ತತ್ತರಿಸಿ ಹೋಗಿದ್ದ ಸಮುದಾಯಕ್ಕೆ ದಯೆ, ಪ್ರೀತಿ, ಅನುಕಂಪದ ಮಾನವೀಯ ಸ್ಪರ್ಶವನ್ನು ಜಗಜ್ಯೋತಿ ಬಸವಣ್ಣನವರು ನೀಡಿದ್ದಾರೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ಪಟ್ಟಣದ ಬಸವ ಸರ್ಕಲ್‌ನಲ್ಲಿ ಶುಕ್ರವಾರ ಸರಳವಾಗಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದ ಅವರು, ಬಸವಣ್ಣನವರು ಎಂಟು ನೂರು ವರ್ಷಗಳ ಹಿಂದೆಯೇ ಜಾತಿ ಪದ್ಧತಿ ವಿರುದ್ಧ ಹೋರಾಡಿದವರು ಎಂದರು. ಸಚಿವೆ ಶಶಿಕಲಾ ಜೊಲ್ಲೆ, ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ,ಬಸವಪ್ರಸಾದ ಜೊಲ್ಲೆ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಬಾಬು ಮಿರ್ಜೆ, ಶಕುಂತಲಾ ಡೋಣವಾಡೆ ಇದ್ದರು.
ಕೊಕಟನೂರ ವರದಿ: ಪ್ರತಿಯೊಬ್ಬರೂ ಬಸವ ತತ್ತ್ವ ಕಾಯಕ ತತ್ವ್ತ ಅಳವಡಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಅಡಹಳ್ಳಿ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಚಣ್ಣವರ ಹೇಳಿದರು. ಅಥಣಿ ತಾಲೂಕಿನ ಅಡಹಳ್ಳಿ ಗ್ರಾಪಂ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನುಭವ ಮಂಟಪದ ಮೂಲಕ ಎಲ್ಲರಿಗೂ ಕಾಯಕದ ಮಹತ್ವ ತಿಳಿಸಿದ ಬಸವಣ್ಣ ಎಂದಿಗೂ ಅಮರ ಎಂದರು. ಗ್ರಾಪಂ ಉಪಾಧ್ಯಕ್ಷ ಲಚ್ಚಪ್ಪ ಪೂಜಾರಿ, ಈರಗೌಡ ಪಾಟೀಲ, ಸಿದ್ದು ಕೆಂಚಣ್ಣವರ, ಭೀಮು ಕೇರಿ, ಕಲ್ಮೇಶ ಗುಡಿಮನಿ, ಮೋಹನ ಸೂರ್ಯವಂಶಿ, ಬಿಂದು ಕೋಳಿ, ಮುರಳಿ ಭಜಂತ್ರಿ, ಘಟಿವಾಳಪ್ಪ ಗುಡ್ಡಾಪುರ, ರಾಮು ಹೊನವಾಡ, ಸುನೀಲ ಕೆಂಚಣ್ಣವರ, ಪಿಡಿಒ ಶರಣಗೌಡ ಪಾಟೀಲ ಇದ್ದರು. ಬಸವ ವೃತ್ತದಲ್ಲೂ ಜಯಂತಿ ಆಚರಿಸಲಾಯಿತು.
ಅಥಣಿ ವರದಿ: ಬಸವ ಜಯಂತಿ ಅಂಗವಾಗಿ ಅಧಿಕೃತವಾಗಿ ಲೋಕಾರ್ಪಣೆಗೆ ಸಿದ್ಧವಾಗಿದ್ದ ಇಲ್ಲಿಯ ಬಸವೇಶ್ವರ ವೃತ್ತದ ಆಶ್ವಾರೂಢ ಬಸವೇಶ್ವರ ಕಂಚಿನ ಪುತ್ಥಳಿಗೆ ಬಸವೇಶ್ವರ ಯುವಕ ಸಂಘದ ಸದಸ್ಯರು ಶುಕ್ರವಾರ ಪೂಜೆ ಸಲ್ಲಿಸಿದರು. ಸರ್ಕಾರದ ಮಾರ್ಗಸೂಚಿಯನ್ವಯ ದೈಹಿಕ ಅಂತರ ಕಾಯ್ದುಕೊಂಡು ಬಸವೇಶ್ವರ ಮೂರ್ತಿಗೆ ಹಾರ ಹಾಕಿ ಪೂಜೆ ಸಲ್ಲಿಸಲಾಗಿದೆ ಎಂದು ಸಂಘಟಕ ಎಸ್.ಆರ್.ಘೂಳಪ್ಪನವರ ತಿಳಿಸಿದರು. ಕರೋನಾ 2ನೇ ಅಲೆಯ ತೀವ್ರತೆ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು. ಅರುಣ ಬಾಸಿಂಗಿ, ಶಿವಾನಂದ ಹುನ್ನೂರ, ಧರೆಪ್ಪ ಠಕ್ಕಣವರ, ಮುರುಘೇಶ ಬಾನಿ, ರಮೇಶ ಕಾಗಲಿ, ಹನುಮಂತ ಬಾಸಿಂಗಿ ಇತರರು ಇದ್ದರು.
ಮೇಖಳಿ ವರದಿ: ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ಶುಕ್ರವಾರ ಮಾರ್ಗಸೂಚಿಯಂತೆ ದೈಹಿಕ ಅಂತರ ಕಾಪಾಡಿಕೊಂಡು ಶಿವಬಸವ ಜಯಂತಿ ಆಚರಿಸಲಾಯಿತು. ಕೋಟೆಮ್ಮದೇವಿ ದೇವಸ್ಥಾನ ಆವರಣದಲ್ಲಿ ಅಳವಡಿಸಿರುವ ಬಸವಣ್ಣನ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷ ವಿವೇಕ ಲಕ್ಷ್ಮಣ ಹಟ್ಟಿಕಾರ ಪೂಜೆ ಸಲ್ಲಿಸಿದರು. ಶಿವಾಜಿ ಭಾವಚಿತ್ರಕ್ಕೆ ತಾಪಂ ಸದಸ್ಯ ಬಸಪ್ಪ ಖಿಚಡೆ ಪೂಜೆ ಸಲ್ಲಿಸಿದರು. ಗ್ರಾಪಂ ಸದಸ್ಯ ಸುನೀಲ ಖಿಚಡೆ, ಗಜಾನನ ಮುತಾರೆ, ಮಹಾದೇವ ಕೊಟ್ರೆ, ಮಹೇಶ ಮುತಾರೆ ಇತರರು ಇದ್ದರು.