

ಶಿರಹಟ್ಟಿ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿ ಭಗ್ನಗೊಳಿಸಿದ ದುಷ್ಕರ್ವಿುಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಶಿರಹಟ್ಟಿ ತಾಲೂಕು ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗ ದಳ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ವಿಹಿಂಪ ತಾಲೂಕು ವಕ್ತಾರ ಸುರೇಶ ಅಕ್ಕಿ, ನಾಗರಾಜ ಲಕ್ಕುಂಡಿ ಮಾತನಾಡಿ, ಧರ್ಮ ಜಾಗೃತಿಗೊಳಿಸಿ ಜನತೆಯನ್ನು ಸನ್ಮಾರ್ಗದಲ್ಲಿ ನಡೆಯಲು ನಾಡಿನ ಅನೇಕ ಶರಣರು, ಐತಿಹಾಸಿಕ ಪುಣ್ಯಪುರುಷರು ಅವಿಸ್ಮರಣೀಯರಾಗಿದ್ದಾರೆ. ಅಂಥವರಲ್ಲಿ ಜಗಜ್ಯೋತಿ ಬಸವಣ್ಣನವರು ಒಬ್ಬರಾಗಿದ್ದು, ಇಂಥ ವಿಶ್ವ ಆರಾಧಕನ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದರು.
ಶೀಘ್ರವೇ ಮೂರ್ತಿಯನ್ನು ಮರು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದರು. ಶಿರಸ್ತೇದಾರ ಜಿ.ಪಿ. ಪೂಜಾರ ಮನವಿ ಸ್ವೀಕರಿಸಿದರು. ವೀರಣ್ಣ ಅಂಗಡಿ, ಸಂತೋಷ ಕುರಿ, ಎನ್.ಸಿ. ಲಕ್ಕುಂಡಿ, ಯಲ್ಲಪ್ಪ ಇಂಗಳಗಿ, ಪರಶುರಾಮ ಡೊಂಕಬಳ್ಳಿ, ಮಂಜುನಾಥ ರಡ್ಡೇರ, ಜಗದೀಶ ತೇಲಿ, ಗೌತಮ್ ಕಪ್ಪತ್ತನವರ, ರಾಕೇಶ ಹಲಸೂರ, ಎಫ್.ಎಸ್. ಇಂಗಳಗಿ, ಚಿನ್ನಪ್ಪ ವರವಿ ಇತರರು ಇದ್ದರು.