

ಮೈಸೂರು: ಬಸವಣ್ಣನವರು, ಅಂಬೇಡ್ಕರ್ ಅವರ ತತ್ವಾದರ್ಶವನ್ನು ಈಗಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಹೇಳಿದರು.
ಕರ್ನಾಟಕ ಸೇನಾ ಪಡೆ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವೇಶ್ವರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಣ್ಣನವರು ಜಗತ್ತು ಕಂಡ ದೊಡ್ಡ ದಾರ್ಶನಿಕ. ಅವರು 12ನೇ ಶತಮಾನದಲ್ಲೇ ಸಮಾನತೆ ವಿಚಾರವಾಗಿ ಹೋರಾಡಿದವರು. ಅನುಭವ ಮಂಟಪವನ್ನು ತೆರೆದು ಎಲ್ಲ ಸಮುದಾಯಗಳನ್ನು ಸೇರಿಸಿದವರು ಎಂದರು.
ಅಂಬೇಡ್ಕರ್ ಅವರು ಶ್ರೇಷ್ಠ ಜ್ಞಾನಿ. ಓದಿದರೆ ಮಾತ್ರ ನಿನ್ನ ವಿದ್ಯೆಗೆ ಜನರು ಹೆದರುತ್ತಾರೆ ಎಂದು ಹೇಳಿದ್ದರು. ಬೇರೆ ದೇಶಗಳಿಗೆ ಸಂವಿಧಾನ ರಚಿಸುವುದು ಸುಲಭ. ಆದರೆ, ಭಾರತದಲ್ಲಿ ಹಲವಾರು ಭಾಷೆಗಳು, ಜಾತಿ, ಧರ್ಮಗಳು ಇರುವುದರಿಂದ ಸಂವಿಧಾನ ರಚಿಸಿರುವುದು ಅತ್ಯಂತ ಕ್ಲಿಷ್ಟಕರ. ಆದರೆ, ಈ ಕೆಲಸವನ್ನು ಅಂಬೇಡ್ಕರ್ ಸುಲಭಗೊಳಿಸಿ ಉತ್ತಮ ಸಂವಿಧಾನ ನೀಡಿದ್ದಾರೆ. ಇಂದಿಗೂ ವಿಶ್ವಾದ್ಯಂತ ಅಂಬೇಡ್ಕರ್ ಅವರನ್ನು ನೆನೆಯುತ್ತಾರೆ ಎಂದರು
ವಿವಿಧ ಕ್ಷೇತ್ರಗಳ ಸಾಧಕರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಲಕ್ಷಮ್ಮ, ಮೈಸೂರು- ಚಾಮರಾಜನಗರ ಸಹಕಾರ ಬ್ಯಾಂಕ್ ನಿರ್ದೇಶಕ ಡಾ.ಎಂ.ಬಿ. ಮಂಜೇಗೌಡ, ಕೆಎಸ್‌ಆರ್‌ಟಿಸಿ ಜಾಗೃತಿ ಭದ್ರತಾ ಅಧಿಕಾರಿ ಎನ್.ಎಸ್. ಶಿವರಾಜೇಗೌಡ, ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಗೃಹ ನಿರ್ಮಾಣ ಕ್ಷೇತ್ರದ ಅಧ್ಯಕ್ಷ ಜಿ.ಎಸ್.ಅಶೋಕ್ ಕುಮಾರ್, ‘ವಿಷನ್ ಟೀಂ ಮೈಸೂರು’ನ ಅಧ್ಯಕ್ಷ ನಂದೀಶ್ ಕುಮಾರ್, ಜೀವಧಾರ ರಕ್ತ ದಾನ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಎಸ್.ಇ.ಗಿರೀಶ್, ಪಾಂಡವಪುರ ಪ್ರೌಢಶಾಲೆ ಶಿಕ್ಷಕ ಲೋಕೇಶ್ ಕುಲ್ಕುಂದ, ಕನ್ನಡ ಹೋರಾಟ ಗೋವಿಂದರಾಜು ಮುತ್ತಿಗೆ ಅವರಿಗೆ ಶ್ರೀಬಸವೇಶ್ವರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಕಾಯಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಎಸ್‌ಎಂಪಿ ಡೆವಲಪರ್ಸ್ ವತಿಯಿಂದ ಮಹಾರಾಣಿ ಕಲಾ ಕಾಲೇಜಿನ ಸುಮಾರು 40 ವಿದ್ಯಾರ್ಥಿನಿಯರಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.
ವಿಪ್ರ ಮುಖಂಡ ಡಾ.ರಘುರಾಮ್ ಕೆ ವಾಜಪೇಯಿ, ಕರಾಮುವಿ ಶೈಕ್ಷಣಿಕ ಡೀನ್ ಡಾ. ಎನ್.ಲಕ್ಷ್ಮೀ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್, ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಶ್ರೀನಿವಾಸ್‌ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಮೂಗೂರು ನಂಜುಂಡಸ್ವಾಮಿ, ಪ್ರಭುಶಂಕರ್, ಗೋಲ್ಡ್ ಸುರೇಶ್ ಇನ್ನಿತರರಿದ್ದರು.
*5
ರೋಟರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಮಹಾರಾಣಿ ಕಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿ.ಎನ್.ನಂಜುಂಡಸ್ವಾಮಿ, ಡಾ.ರಘುರಾಮ್ ಕೆ. ವಾಜಪೇಯಿ, ಡಾ. ಎನ್.ಲಕ್ಷ್ಮೀ, ಎಸ್. ಜಯಪ್ರಕಾಶ್, ಶ್ರೀನಿವಾಸ್‌ಗೌಡ ಇನ್ನಿತರರಿದ್ದರು