

ಚನ್ನಮ್ಮ ಕಿತ್ತೂರು: ಬಸವಣ್ಣನವರ ತತ್ತ್ವ ಆದರ್ಶಗಳನ್ನು ಗಟ್ಟಿಯಾಗಿ ಹೇಳಿದವರು ಲಿಂಗಾನಂದ ಸ್ವಾಮೀಜಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ತಾಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪದಲ್ಲಿ ಲಿಂಗಾನಂದ ಸ್ವಾಮೀಜಿಗಳ 28ನೇ ಸ್ಮರಣೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಲಿಂಗಾನಂದ ಶ್ರೀ ಪ್ರಶಸ್ತಿ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ಎಲ್ಲರೂ ಒಂದೇ ಎನ್ನುವ ಸಮಾನ ಭಾವನೆ ಬರಬೇಕು. ಇದೂವರೆಗೂ ಸಮಾನತೆ ಬಂದಿಲ್ಲ. ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಮಾತ್ರ ಬಸವ ತತ್ತ್ವಕ್ಕೆ ಹಾಗೂ ಶರಣರಿಗೆ ಗೌರವ ನೀಡಿದಂತಾಗುತ್ತದೆ ಎಂದರು.
ಕಿತ್ತೂರು ತಾಲೂಕು ಮಾಡಲು ಇಲ್ಲಿನ ಜನರ ಬೇಡಿಕೆ ಇತ್ತು. ಸರ್ಕಾರ ನಿಯಮಾವಳಿ ಬೇರೆ ಇದ್ದರೂ ಸಹ ಇತಿಹಾಸ ಪ್ರಸಿದ್ಧ ತಾಲೂಕು ಮಾಡಲು ಕ್ರಮ ವಹಿಸುವಂತೆ ಸೂಚಿಸಿ ಆದೇಶ ಹೊರಡಿಸಿದ್ದರ ಪರಿಣಾಮ ಇಂದು ಕಿತ್ತೂರು ತಾಲೂಕು ಕೇಂದ್ರವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಬೈಲೂರು ಆದರ್ಶ ಗ್ರಾಮವಾಗಿದೆ. ಇಲ್ಲಿ ಸಮಾನತೆ, ಸ್ವಚ್ಛತೆಗೆ ಆದ್ಯತೆ ನೀಡಿಲಾಗಿದ್ದು, ಇಂದು ಮಾದರಿ ಗ್ರಾಮವಾಗಿದೆ ಎಂದರು. ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದರು. ಶರಣ ಬಸವಕುಮಾರ ಪಾಟೀಲ ಅವರಿಗೆ ಲಿಂಗಾನಂದ ಶ್ರೀ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು. ಜತೆಗೆ ಲಿಂಗಾನಂದರ ಶ್ರೀಗಳ ವಚನ ಧರ್ಮ ಚಳವಳಿ ಹಾಗೂ ಕಿರುವಚನ ಸಂಪುಟ ಬಿಡುಗಡೆಗೊಳಿಸಲಾಯಿತು. ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಅತಿಥಿಗಳನ್ನು ಸತ್ಕರಿಸಲಾಯಿತು.
ಚಿ
ಕ್ಕಮಂಗಳೂರು ಬಸವತತ್ತ್ವಪೀಠದ ಬಸವ ಮರುಳಸಿದ್ದ ಸ್ವಾಮೀಜಿ, ಹತ್ತರಗಾ ಬಸವಕಲ್ಯಾಣ ಗೋಣಿರುದ್ರೇಶ್ವರ ಮಠದ ಗೋಣಿರುದ್ದ ಸ್ವಾಮೀಜಿ, ಬೇಲೂರು-ಹಾಸನದ ಮಹಾಂತ ಸ್ವಾಮೀಜಿ, ರಾಹುಲ್ ಜಾರಕಿಹೊಳಿ, ರೋಹಿಣಿ ಪಾಟೀಲ, ಎಸ್.ಆರ್.ಗುಂಜಾಳ, ಬಸವಕುಮಾರ ಪಾಟೀಲ, ರತ್ನಾಕರ ಕುಂದಾಪುರ, ಎಂ.ಜಿ.ಪಾಟೀಲ, ಬಸವರಾಜ ಸಂಗೊಳ್ಳಿ ಇತರರು ಇದ್ದರು.