ಬಸವಣ್ಣ ಜಗತ್ತಿನ ಸಾಂಸ್ಕೃತಿಕ ಪುರುಷ, ವಿಶ್ವ ಮಾನವ

CTD SAHRANA SAHITYA SAMELANA- SANAMANa----
Published on

ಚಿತ್ರದುರ್ಗ:ಬಸವಣ್ಣನನ್ನು ನಾಡಿನ ಸಾಂಸ್ಕೃತಿಕ ನಾಯಕನೆಂದು ರಾಜ್ಯಸರ್ಕಾರ ಘೋಷಿಸಿದೆ. ಆದರೆ, ನುಡಿದಂತೆ ನಡೆದ ಅಣ್ಣ ಬಸವಣ್ಣ ಜಗತ್ತಿನ ಸಾಂಸ್ಕೃತಿಕ ಪುರುಷ ಎಂದು ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ ವಿ. ಪಾಟೀಲ ಹೇಳಿದರು.

ಮುರುಘಾಮಠದಲ್ಲಿ ಆಯೋಜಿಸಿದ್ದ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ 2ನೇ ದಿನ ಭಾನುವಾರ ಸಮಾರೋಪ ಭಾಷಣ ಮಾಡಿದ ಅವರು, ಬಸವಾದಿ ಶರಣರ ಉದಾತ್ತ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಮ್ಮೇಳನ ನೆರವಾಗಲಿದೆ ಎಂದರು.

ಪರಿಷತ್ ಶರಣ ಸಾಹಿತ್ಯದ ಮೌಲ್ಯಗಳನ್ನು ಪರಿಚಯಿಸುತ್ತಿದೆ. ಶರಣ ಸಂಸ್ಕೃತಿಯ ಜೀವಾಳವೇ ಬಸವಣ್ಣ. ಅವರೊಬ್ಬ ಸಮಗ್ರ ಕ್ರಾಂತಿ ಪುರುಷ, ವಿಶ್ವಮಾನವ. ಜಗತ್ತಿಗೆ ಕಾಯಕ, ದಾಸೋಹ, ಸಮಾನತೆ, ದಯೆ, ಇವ ನಮ್ಮವನೆಂಬ ತತ್ವಗಳನ್ನು ಕೊಟ್ಟಿದ್ದಾರೆ ಎಂದರು.

ಬೆಳಗಾವಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಬಸವಣ್ಣನ ಆದರ್ಶಗಳಲ್ಲಿ ಕೆಲವನ್ನು ನಾನು ಅನುಸರಿಸುತ್ತಿದ್ದೇನೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದನ್ನು ಹಾಗೂ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರ ಬಳಿ ಬಸವಣ್ಣನ ಕುರಿತು ಡಾ.ಬಿ.ಆರ್. ಅಂಬೇಡ್ಕರ್ ಅವರು ಅಭಿಮಾನದಿಂದ ಮಾತನಾಡಿದ್ದನ್ನು ನೆನಪಿಸಿದರು.

ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟವರು ಯುಗ ಪುರುಷ ಬಸವಣ್ಣ. ವಚನಗಳ ಆಶಯಗಳು ನಮ್ಮ ಸಂವಿಧಾನದಲ್ಲಿವೆ. ಸಮಾಜದಲ್ಲಿರುವ ಸಂಕುಚಿತ ಭಾವನೆ ಹೋಗಬೇಕಿದೆ ಎಂದರು.

ಪ್ರವಚನದಿಂದ ಸೇವೆ ಕಡೆಗೆ, ಉಪದೇಶದಿಂದ ಅನುಷ್ಠಾನದೆಡೆಗೆ, ವಾಗ್ದಾನದಿಂದ ಕಾರ್ಯಕ್ಷಮತೆ ಕಡೆಗೆ ನಾವಿಂದು ಸಾಗಬೇಕಿದೆ. ಸಾಹಿತ್ಯಕ್ಕೆ ಶರಣರ ಕೊಡುಗೆ ಇದೆ. ಶರಣರ ಮೌಲ್ಯಗಳನ್ನು ಅಳವಡಿಸಿಕೊಂಡರೆ ತಲೆ ಎತ್ತಿ ಹೇಳಬಹುದು ನಾನು ಭಾರತೀಯ ಎಂದು, ಅಭಿಮಾನದಿಂದ ಹೇಳಬಹುದು ನಾನು ಕನ್ನಡಿಗ ಎಂದು, ಎದೆ ತಟ್ಟಿಕೊಂಡು ಹೇಳಬಹುದು ನಾನು ಶರಣ ಸಮಾಜದವನು ಎಂದು, ಪ್ರೀತಿಯಿಂದ ಹೇಳಬಹುದು ನಾನು ವಿಶ್ವಮಾನವನೆಂದು ಎಂದು ಅಭಿಪ್ರಾಯಪಟ್ಟರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅನ್ನು, ಅಖಿಲ ಭಾರತ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪರಿಷತ್ ಎಂದು ತಿದ್ದುಪಡಿ ಮಾಡುವಂತೆ ಸಲಹೆ ನೀಡಿದರು.

ಸಮ್ಮೇಳನಾಧ್ಯಕ್ಷ ಡಾ. ಸಿದ್ದರಾಮ ಬೆಲ್ದಾಳ ಶರಣರು ಮಾತನಾಡಿ, ಶರಣ ಸಾಹಿತ್ಯ ಯಾವುದೇ ಜಾತಿ, ಪಂಗಡಗಳಿಗೆ ಒಳಪಟ್ಟಿದ್ದಲ್ಲ. ಇದರ ಆದರ್ಶಗಳು ಮಾನವನ ಸರ್ವಾಂಗೀಣ ವಿಕಸಕ್ಕೆ ದಾರಿಯಾಗಿವೆ ಎಂದರು.

ಬಸವಣ್ಣನವರ ಮಹಾಮನೆಯೇ ಅನುಭವ ಮಂಟಪ. ಸ್ವಾರ್ಥ ಭಾವನೆ ತೊಡೆದರೆ ಸಮಾಜದಲ್ಲಿ ಸಮತೋಲನ ಸಾಧ್ಯವಾಗಲಿದೆ. ಜಾತಿ, ವರ್ಣಬೇಧ ಅಳಿಸಬೇಕು. ವಚನಗಳನ್ನು ಸುಮ್ಮನೇ ಓದದೆ ಅದರ ಸಾರ ಅರಿತು ನಡೆಯಬೇಕು ಎಂದರು.

ಇಳಕಲ್ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಪರಿಷತ್ ಕಾರ್ಯಕ್ರಮಗಳಿಂದಾಗಿ ಲಕ್ಷಾಂತರ ಜನರು ಬಸವಪ್ರಿಯರಾಗಿದ್ದಾರೆ. ಬೆಲ್ದಾಳ ಶರಣರಲ್ಲಿ ಅದ್ಭುತವಾದ ಜ್ಞಾನವಿದೆ. ಇಷ್ಟಲಿಂಗ ಯೋಗ ಇದಕ್ಕೆ ಕಾರಣವಾಗಿದೆ. ಶರಣ ಸಮಾಜದಲ್ಲಿ ಮೇಲ್ವರ್ಗ, ಕೆಳವರ್ಗ ಎಂಬುದಿಲ್ಲ ಎಂದರು.

ಸನ್ಮಾನ ಸ್ವೀಕರಿಸಿದ ದಯಾನಂದ ಮಾತನಾಡಿ, ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಬಸವ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಬಸವ ತತ್ವದೆಡೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಇದನ್ನು ಹೆಚ್ಚಿಸಲು ಪರಿಷತ್‌ನ ಸಹಕಾರ ಅಗತ್ಯವಿದೆ ಎಂದರು.

ರಾಜ್ಯಸಭೆ ಮಾಜಿ ಸದಸ್ಯ ಎಚ್. ಹನುಮಂತಪ್ಪ, ನಾಡೋಜ ಗೊ.ರು. ಚನ್ನಬಸಪ್ಪ, ಸಂಶೋಧಕ ಪ್ರೊ.ಎಂ.ಜಿ. ನಾಗರಾಜ, ಸುಮಂಗಲಿ ಸೇವಾಶ್ರಮದ ಡಾ. ಸುಶೀಲಮ್ಮ, ನಾಡೋಜ ಎಸ್. ಷಡಕ್ಷರಿ, ಪರಿಷತ್ ರಾಜ್ಯ ಹಿರಿಯ ಉಪಾಧ್ಯಕ್ಷ ಅಪ್ಪಾರಾವ್ ಅಕ್ಕೋಣಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವೂಡೇ ಪಿ. ಕೃಷ್ಣ, ಅಮೆರಿಕಾದ ನಾರ್ಥ್ ವಿಎಸ್‌ಎನ್ ಅಧ್ಯಕ್ಷ ತುಮಕೂರು ದಯಾನಂದ ಹಾಗೂ ಮಾಜಿ ಶಾಸಕ ಮಹಿಮ ಪಾಟೇಲ್‌ರನ್ನು ಸನ್ಮಾನಿಸಲಾಯಿತು. ವಿವಿಧ ಜಿಲ್ಲೆಗಳ ಪರಿಷತ್ ಹಾಗೂ ಕದಳಿ ವೇದಿಕೆ ಪದಾಧಿ ಕಾರಿಗಳನ್ನು ಗೌರವಿಸಲಾಯಿತು.

ಡಾ. ಶ್ರೀ ಬಸವಕುಮಾರ ಸ್ವಾಮೀಜಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್, ಜಿಲ್ಲಾಧ್ಯಕ್ಷ ಕೆ.ಎಂ. ವೀರೇಶ್, ಎಂಎಲ್‌ಸಿ ಕೆ.ಎಸ್.ನವೀನ್, ರಾಜ್ಯಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಷಡಕ್ಷರಿ ಇತರರಿದ್ದರು.

ಬಸವಾಮೃತ ಮತ್ತು ಧೀಮಂತ ಯಜಮಾನಿ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಡಾ.ರೂಪಾ ನಿರೂಪಿಸಿದರು. ಹುರಳಿ ಬಸವರಾಜ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net