

ಬಸವಕಲ್ಯಾಣ: ಬಸವ ಮಹಾಮನೆ ಟ್ರಸ್ಟ್ರನಿಂದ ನೂತನ ಅನುಭವ ಮಂಟಪದ ಸಮೀಪದ ಬಸವ ಮಹಾಮನೆ ಪರಿಸರದಲ್ಲಿ ೨೧ರಿಂದ ಮೂರು ದಿನ ಅನುಭವ ಮಂಟಪ ಸಂಸತ್ತು ೭ನೇ ಅಧಿವೇಶನ ಹಾಗೂ ೨೩ರಂದು ಸಮಾನತಾ ಸಮಾವೇಶ ನಡೆಯಲಿದೆ ಎಂದು ಟ್ರಸ್ಟ್ರ ಅಧ್ಯಕ್ಷರಾದ ಶ್ರೀ ಡಾ.ಸಿದ್ಧರಾಮ ಬೆಲ್ದಾಳ ಶರಣರು ಹೇಳಿದರು.
೨೩ರಂದು ಬೆಳಗ್ಗೆ ೯.೩೦ಕ್ಕೆ ಅಧಿವೇಶನದ ಸಮಾರೋಪ ಸಮಾರಂಭ. ಬೆಳಗ್ಗೆ ೧೧.೩೦ಕ್ಕೆ ಸಮಾನತಾ ಸಮಾವೇಶ ನಡೆಯಲಿದೆ ಎಂದು ಬಸವ ಮಹಾಮನೆ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪೂಜ್ಯರು ಮಾಹಿತಿ ನೀಡಿದರು.
ಜಗತ್ತಿನ ಇತಿಹಾಸದಲ್ಲಿ ೧೨ನೇ ಶತಮಾನದ ಬಸವಾದಿ ಶರಣ ಕೊಡುಗೆ ಅತ್ಯುನ್ನತವಾದ್ದು, ಅನುಭವ ಮಂಟಪವನ್ನು ಸ್ಥಾಪಿಸಿದ ಬಸವಣ್ಣನವರು ಸರ್ವ ಸಮಾನತೆಯ ತಳಹದಿಯ ಮೇಲೆ ಮಾನವ ಹಕ್ಕುಗಳನ್ನು ಪ್ರತಿಪಾದಿಸಿದ್ದರು. ಅಂದು ಸರ್ವ ಸಮಾನತೆ ಏಕತೆಯನ್ನು ಸಾಧಿಸಿದ್ದರು. ಬಸವಾದಿ ಶರಣರ ನಿಜ ತಾತ್ವಿಕತೆ ಅರಿಯುವ ಚಿಂತನ ೭ನೇ ಅದಿವೇಶನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಬಸವಣ್ಣನವರ ನೇತೃತ್ವದಲ್ಲಿ ಅಂದು ಅನುಭವ ಮಂಟಪದಲ್ಲಿ ವಾಸ್ತವದ ನೆಲೆಗಟ್ಟಿನಲ್ಲಿ ಚಿಂತನ-ಮಂಥನ ನಡೆಯುತ್ತಿತ್ತು. ಸಮಾನತೆ, ಶಾಂತಿ, ಸಂತೃಪ್ತಿಯಿಂದ ಕೂಡಿ ಬದುಕುವ ಕುರಿತ ಚಿಂತನೆ ಅದಾಗಿತ್ತು. ಎಲ್ಲರೂ ಕಾಯಕ ಯೋಗಿಗಳಾಗಿದ್ದರು. ಸತ್ಯ, ಶುದ್ಧ, ಕಾಯಕ-ದಾಸೋಹದ ಬಗ್ಗೆ ಚಿಂತನೆ ನಡೆಯುತ್ತಿತ್ತು. ಈಗ ನಾವೆಲ್ಲರೂ ಎಲ್ಲಿ ದಾರಿ ತಪ್ಪುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಕುರಿತು ಚಿಂತನೆ ಮಾಡುವುದೇ ಅಧಿವೇಶನದ ಮೂಲ ಆಶಯವಾಗಿದೆ ಎಂದರು.
ಮೊದಲ ದಿನ ಬೆಳಗ್ಗೆ ಅನುಭವ ಮಂಟಪ ಸಂಸತ್ತು ಅಧಿವೇಶನದ ವಿಷಯಗಳು, ಮಧ್ಯಾಹ್ನ ೩ಕ್ಕೆ ಬಸವಾದಿ ಶರಣರ ಮೂಲ ಗುರಿ ಇಹಪರವೆಂಬೆರಡಗಳಿದುಬೆ ಶಿವಯೋಗ ವಿಷಯ ಕುರಿತು, ೨೨ರಂದು ಬೆಳಗ್ಗೆ ೧೦ಕ್ಕೆ ಷಟಸ್ಥಲ ಒಂದು ವಿಜ್ಞಾನ, ಭಕ್ತ, ಮಹೇಶ, ಪ್ರಸಾದಿ ಸ್ಥಲ ಸ್ವರೂಪ, ಮಧ್ಯಾಹ್ನ ೩ಕ್ಕೆ ಪ್ರಾಣಲಿಂಗ ಶರಣ ಐಕ್ಯ ವಿಷಯ ಕುರಿತು ಗೋಷ್ಠಿ. ೨೩ರಂದು ಸಮಾರೋಪ ಸಮಾರಂಭ ಜರುಗಲಿದೆ ಎಂದರು.
ಕರ್ನಾಟಕ ರಾಜ್ಯ ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ, ಬಿಎಸ್‌ಐ ತಾಲೂಕು ಅಧ್ಯಕ್ಷ ಮನೋಹರ ಮೈಸೆ, ಪ್ರಮುಖರಾದ ಶಾಮರಾವ ಪ್ಯಾಟಿ, ಸಂಜುಕುಮಾರ ಗಾಯಕವಾಡ, ದಿಗಂಬರ ಜಲ್ದೆ, ಮಾನವ ಬಂದುತ್ವ ವೇದಿಕೆ ತಾಲೂಕು ಸಂಚಾಲಕ ಪಿಂಟು ಕಾಂಬಳೆ, ಎಂ.ಬಿ.ಲಿಂಗಪ್ಪ ಇದ್ದರು.
ವಿಶ್ವಕ್ಕೆ ಸಮಾನತೆ ಸಾರಿದ ಕಲ್ಯಾಣ ಸಮಾನತೆಯ ರಾಜಧಾನಿ. ಮನುಕುಲದ ಕಲ್ಯಾಣದಕ್ಕೆ ಶರಣರು ಸಮಾನತೆಗಾಗಿ ಕ್ರಾಂತಿ ನಡೆಸಿದ ನೆಲದಲ್ಲಿ ೨೩ರಂದು ಶ್ರೀ ಸಿದ್ಧರಾಮ ಬೆಲ್ದಾಳ ಶರಣರ ನೇತೃತ್ವದಲ್ಲಿ ನಡೆಯಲಿರುವ ಸಮಾನತಾ ಸಮಾವೇಶದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು.
| ಶ್ರೀಕಾಂತ ಸ್ವಾಮಿ ಸಂಚಾಲಕ ಕರ್ನಾಟಕ ಲಿಂಗಾಯತ ಸಮನ್ವಯ ಸಮಿತಿ
ವಿಶ್ವಕ್ಕೆ ವಚನ ಸಾಹಿತ್ಯ ನೀಡಿದ ನೆಲ ಕಲ್ಯಾಣ. ಸಮಾಜದಲ್ಲಿ ಸಮಾನತೆ, ಸಾಮರಸ್ಯ ಮೂಡಿಸುವ ಉದ್ದೇಶದಿಂದ ಇಲ್ಲಿ ನಡೆಯುವ ಐತಿಹಾಸಿಕ ಸಮಾವೇಶದ ಯಶಸ್ವಿಗೆ ಎಲ್ಲರೂ ಕೈ ಜೋಡಿಸಬೇಕು. ಎಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
| ಲಕ್ಷ್ಮಣ ದಸ್ತಿ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ
ಶ್ರೀಗಳ ಸಾನ್ನಿಧ್ಯದಲ್ಲಿ ಉದ್ಘಾಟನೆ: ನೂತನ ಅನುಭವ ಮಂಟಪದ ಸಮೀಪದ ಮಹಾಮನೆ ಪರಿಸರದಲ್ಲಿ ೨೩ರಂದು ಬೆಳಗ್ಗೆ ೧೧.೩೦ಕ್ಕೆ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಖಾನಾಪುರದ ಪೂಜ್ಯ ಜಗದೀಶ್ವರಿ ಮಾತಾ, ಮನಗೂಳಿಯ ಶ್ರೀ ವೀರತಿಶಾನಂದ ಸ್ವಾಮೀಜಿ, ಆಣದೂರಿನ ಪೂಜ್ಯ ಭಂತೆ ಧಮ್ಮಾನಂದಜಿ, ಬೀದರ್‌ನ ಮೌಲಾನಾ ಮಹ್ಮದ್ ತಾಸಾದ್ದುಕ್ ನಾದ್ವಿ, ಕಲಬುರಗಿಯ ಡಾ.ರಾಬರ್ಟ್ ಮೈಕೆಲ್ ಮಿರಂಡಾ, ಬೀದರ್‌ನ ಗ್ಯಾನಿ ಬಲಬೀರಸಿಂಗ್‌ಜಿ ಸಾನ್ನಿಧ್ಯದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಡಾ.ಸಿ.ಎಚ್.ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ರಹೀಮ್‌ಖಾನ್ ಸಮಾನತಾ ಸಮಾವೇಶ ಉದ್ಘಾಟಿಸುವರು. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಮಾಜಿ ಸಂಸದ ಭಗವಂತ ಖುಬಾ ಮುಖ್ಯ ಅತಿಥಿಗಳಾಗಿರುವರು. ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು.