ಬಸವಕಲ್ಯಾಣದಲ್ಲಿ ಲಿಂಗಾಯತ ಮಹಾಧಿವೇಶನ

5 vikram 8
Published on

ಧಾರವಾಡ: ಲಿಂಗಾಯತ ಸಿದ್ಧಾಂತ ಸಮಾಜ ಚರಿತ್ರೆಗಳ ನಿಜಸ್ವರೂಪ ಶೋಧಿಸಿ, ಸಮಾಜದ ಮುಂದಿಡುವುದು ಇಂದಿನ ಅಗತ್ಯ. ಇದನ್ನು ಪೂರೈಸಲು ಲಿಂಗಾಯತರು ತಮ್ಮ ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಮಹಾಧಿವೇಶನಗಳು ಪೂರಕವಾಗಿವೆ ಎಂದು ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಹೇಳಿದರು.
ನಗರದ ಮುರುಘಾಮಠದ ಸಭಾಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಹಿರಿಯ ಸಾಹಿತಿ ಗೋ.ರು.ಚನ್ನಬಸಪ್ಪ ಸರ್ವಾಧ್ಯಕ್ಷತೆಯಲ್ಲಿ ರಾಷ್ಟ್ರೀಯ ಪ್ರಥಮ ಲಿಂಗಾಯತ ಮಹಾಧಿವೇಶನವು ಮಾ. 4, 5ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಜರುಗಲಿದೆ. ಅಧಿವೇಶನದಲ್ಲಿ ಲಿಂಗಾಯತ ಸಂಘಟನೆ ಕುರಿತು ಚಿಂಥನ, ಮಂಥನ ನಡೆಸಿ ಸಂಘಟನೆ ಬಲಪಡಿಸುವ ಕೆಲಸ ಮಾಡಲಿದೆ ಎಂದರು.
ಅಧಿವೇಶನ ರಾಜಕಿಯೇತರವಾಗಿದ್ದು, ಸರ್ಕಾರದ ಪರ-ವಿರೋಧವಲ್ಲ. ಯಾವುದೇ ಸರ್ಕಾರ ಬಂದರೂ ಅದರ ಮುಂದೆ ನಮ್ಮ ಬೇಡಿಕೆ ಇಟ್ಟು ಒತ್ತಾಯಿಸಲಾಗುವುದು. ಅಂದು 200ಕ್ಕೂ ಹೆಚ್ಚು ಮಠಾಧೀಶರು, ಸಾಹಿತಿಗಳು, ಸಂಶೋಧಕರು, ಅನುಭಾವಿಗಳು ಭಾಗವಹಿಸುವರು. ಬಸವಾದಿ ಪ್ರಮಥರಿಂದ ಸೃಷ್ಟಿಯಾಗಿರುವ ಲಿಂಗಾಯತ ಎನ್ನುವುದು ಒಂದು ಪರಿಪೂರ್ಣ ಸಿದ್ಧಾಂತ. ಇದು ಅಂಗ, ಲಿಂಗಮುಖಿ, ಮಾನಮುಖಿ, ಸಮಾಜಮುಖಿ ಸಿದ್ಧಾಂತವಾಗಿದೆ. ತನ್ನದೆ ಆದ ಸಿದ್ಧಾಂತ ಮತ್ತು ಆಚಾರ ಹೊಂದಿರುವ ಲಿಂಗಾಯತ ಧರ್ಮವು ಸ್ವತಂತ್ರ ಧರ್ಮ ಎಂದು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಹಿರಿಯ ಸಾಹಿತಿ ರಂಜಾನ ದರ್ಗಾ ಮಾತನಾಡಿದರು. ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ, ಡಾ. ಎಸ್.ಆರ್.ಗುಂಜಾಳ, ಡಾ. ಎನ್.ಜಿ. ಮಹಾದೇವಪ್ಪ, ಹಿರಿಯರಾದ ಪಿ.ಎಸ್. ಕೋದಾನಪುರ, ಬಿ.ಬಿ.ಚಕ್ರಸಾಲಿ, ಶಿವಾನಂದ ಶೆಟ್ಟೆಣ್ಣವರ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ಇತರರು ಇದ್ದರು.
ಪ್ರಭು ನಡಕಟ್ಟಿ ಸ್ವಾಗತಿಸಿದರು. ಎಂ.ವಿ.ಗೊಂಗಡಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಬಾಗೇವಾಡಿ ನಿರೂಪಿಸಿದರು. ಬಸವಂತ ತೋಟದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net