

ಬಸವಕಲ್ಯಾಣ: ಎಲ್ಲರನ್ನೂ ನಮ್ಮವರು ಎಂಬ ಭಾವ ಮೂಡಿಸಿದ ಕಲ್ಯಾಣದ ಶರಣರು, ಸಮಾನತೆ ಹಾಗೂ ಸಮ ಸಮಾಜ ರೂಪಿಸಲು ಶ್ರಮಿಸಿದ್ದರು ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಅಬ್ದುಲ್ ಮಾಜೀದ್ ಮಣಿಯಾರ ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಶನಿವಾರ ಆಯೋಜಿದ್ದ ಇತಿಹಾಸ ಅಧ್ಯಯನದ ಆಯಾಮಗಳು' ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶರಣ, ಸೂಫಿ, ಬೌದ್ಧ, ಜೈನ, ವೈಷ್ಣವ, ನಾಥ ಸೇರಿ ಹಲವು ಪಂಥಗಳಿದ್ದು, ಕಲ್ಯಾಣ ಬಹುಸಂಸ್ಕೃತಿಯ ನೆಲ ಎಂದು ಬಣ್ಣಿಸಿದರು.
ಇತಿಹಾಸಕಾರರು ತಮ್ಮ ಸಂಶೋಧನೆಯ ಫಲಿತಗಳು ಸಮಾಜಕ್ಕೆ ನೀಡುತ್ತಾರೆ. ಕೋಟೆ, ಶಾಸನ, ಹಸ್ತಪ್ರತಿ, ತಾಡೋಲೆ, ದೇಗುಲಗಳ ರಚನಾ ವಿನ್ಯಾಸ, ಶಿಲ್ಪಕಲೆ, ಕಲಾಕೃತಿ ಬಗೆಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಚರಿತ್ರೆಕಾರರು ತಮ್ಮ ನಿಲುವುಗಳು ಮಂಡಿಸುತ್ತಾರೆ. ಮಸ್ಕಿ, ಸನ್ನಿತಿಯಲ್ಲಿ ದೊರೆತ ಶಾಸನಗಳಿಂದ ಅಶೋಕ ಚಕ್ರವರ್ತಿಯ ಚರಿತ್ರೆಗೆ ಅಸ್ಮಿತೆ ದೊರೆಯಿತು. ಕರ್ನಾಟಕದಿಂದಲೇ ಅಶೋಕನ ಚರಿತ್ರೆಯ ರಚನೆಗೆ ಆಕಾರ ದೊರೆತಿವೆ ಎಂದರು.
ಶಿವಪುರ, ನಾರಾಯಣಪುರ, ಮೊರಖಂಡಿ, ಉಮಾಪುರದ ಹಳೆಯ ದೇವಾಲಯಗಳು, ಕೋಟೆ, ಶಾಸನಗಳು, ಹಳೆಯ ಬಾವಿಗಳು ಕಲ್ಯಾಣದ ಪ್ರಾಚೀನ ನಾಗರಿಕತೆ, ವೈಭವದ ಇತಿಹಾಸಕ್ಕೆ ಸಾಕ್ಷಿಯಾಗಿವೆ. ಬಸವಣ್ಣನವರ ಹಾಗೂ ಜಾಗತಿಕ ತತ್ವಜ್ಞಾನಿ ತತ್ವ ಸಿದ್ಧಾಂತಗಳ ಅಧ್ಯಯನ ಅಗತ್ಯವಿದೆ ಎಂದರು.
ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಚರಿತ್ರೆಯನ್ನು ಎಲ್ಲ ಸ್ತರಗಳಿಂದ ಗ್ರಹಿಸಬೇಕಾಗಿದೆ. ಚರಿತ್ರೆ ರಚನೆಗೆ ಪರಿಗಣಿಸಿದ ಆಕರಗಳು, ಅನ್ವಯಿಸಿದ ಸಿದ್ಧಾಂತಗಳು ಈ ಎಲ್ಲವನ್ನೂ ಅಧ್ಯಯನದ ವ್ಯಾಪ್ತಿಗೆ ತರಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸಲು ಇತಿಹಾಸದ ಅಧ್ಯಯನ ಬೇಕಾಗುತ್ತದೆ. ಪ್ರತಿಯೊಂದು ಕ್ಷೇತ್ರಕ್ಕೂ ಅದರದೇ ಆದ ಇತಿಹಾಸ ಇರುತ್ತದೆ ಎಂದರು.
ಶ್ರೀ ಬಸವೇಶ್ವರ ಪಿಯು ಕಾಲೇಜು ಪ್ರಾಚಾರ್ಯ ಡಾ.ರುದ್ರಮಣಿ ಮಠಪತಿ, ಐಕ್ಯೂಎಸಿ ಸಂಯೋಜಕ ಪವನ ಪಾಟೀಲ್, ಡಾ.ಬಸವರಾಜ ಖಂಡಾಳೆ, ವಿವೇಕಾನಂದ ಶಿಂಧೆ, ಜಗದೇವಿ ಜವಳಗೆ, ಗಂಗಾಧರ ಸಾಲಿಮಠ, ಬಸವರಾಜ ಗುಂಗೆ, ಶೃತಿ ನೀಲಮಠ, ರೋಶನ್ ಬಿ., ಪ್ರವೀಣ ಬಿರಾದಾರ ಇತರರಿದ್ದರು. ಡಾ.ಶಾಂತಲಾ ಪಾಟೀಲ್ ಸ್ವಾಗತಿಸಿದರು. ಚನ್ನಬಸಪ್ಪ ಗೌರ ನಿರೂಪಣೆ ಮಾಡಿದರು. ಸಂಗೀತಾ ಮಹಾಗಾಂವೆ ವಂದಿಸಿದರು.