

ಬಸವಕಲ್ಯಾಣ: ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ ಬಸವಕಲ್ಯಾಣವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎನ್ನುವುದು ಸೇರಿ ಆರು ಪ್ರಮುಖ ನಿರ್ಣಯ ಅಂಗೀಕರಿಸಲಾಗಿದೆ. ಶ್ರೀ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ನಿರ್ಣಯ ಮಂಡಿಸಿದರು. ಪಾಲ್ಗೊಂಡ ಎಲ್ಲ ಪೂಜ್ಯರು, ಅತಿಥಿಗಳು ಹಾಗೂ ಬಸವ ಭಕ್ತರು ಕರತಾಡನ ಮೂಲಕ ಅನುಮೋದಿಸಿದರು.
ರಾಜ್ಯಾದ್ಯಂತ ನ.೧೧ರಿಂದ ಡಿ.೧ರವರೆಗೆ ಲಿಂಗಾಯತ ಧರ್ಮ ಜಾಗೃತಿ ಅಭಿಯಾನ ಕೈಗೊಳ್ಳುವುದು, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮರು ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿ ಡಿ.೨೦ರಂದು ಬೆಂಗಳೂರಿನಲ್ಲಿ ಹಕ್ಕೊತ್ತಾಯ ಸಮಾವೇಶ ಮಾಡುವುದು ಸೇರಿ ಪ್ರಮುಖ ನಿರ್ಣಯ ಅನುಮೋದಿಸಲಾಯಿತು.
ಏಪ್ರಿಲ್‌ನಲ್ಲಿ ರಾಷ್ಟç ರಾಜಧಾನಿ ನವದೆಹಲಿಯಲ್ಲಿ ಲಿಂಗಾಯತ ಮಹಾಸಮಾವೇಶ ಆಯೋಜನೆ, ಕರ್ನಾಟಕ, ಮಹಾರಾಷ್ಟç ಮತ್ತು ತೆಲಂಗಾಣದಲ್ಲಿ ಲಿಂಗಾಯತ ಧರ್ಮ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವುದು. ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆ ಭರ್ತಿ ಮಾಡಬೇಕು, ಬಸವ ಕಲ್ಯಾಣವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಣಯಿಸಲಾಯಿತು.
ಗೋಷ್ಠಿ ಉದ್ಘಾಟಿಸಿದ ಮಾಜಿ ಎಂಎಲ್ಸಿ ವಿಜಯಸಿಂಗ್ ಮಾತನಾಡಿ, ಬಸವಣ್ಣನವರ ಸಂದೇಶಗಳು ಕೇವಲ ಕಲ್ಯಾಣಕ್ಕೆ ಸೀಮಿತವಲ್ಲ. ವಿಶ್ವವ್ಯಾಪ್ತಿಯಾಗಿವೆ. ಲಿಂಗಾಯತ ಧರ್ಮ ಮಾನ್ಯತೆ ಕುರಿತು ಸಿಎಂ ಜತೆ ಚರ್ಚಿಸಿ, ಕೇಂದ್ರಕ್ಕೆ ಮರುಪ್ರಸ್ತಾವನೆ ಸಲ್ಲಿಸಲು ಪ್ರಯತ್ನಿಸುತ್ತೇನೆ ಎಂದರು.
ಶ್ರೀ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸ್ವಾತಂತ್ರ ಧರ್ಮದ ಮಾನ್ಯತೆ ನೀಡದೆ ಅವಮಾನ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಪ್ರಯತ್ನಿಸಬೇಕು ಎಂದರು.