

ಕಲಬುರಗಿ: ಯುವ ಪೀಳಿಗೆಗೆ ಬಸವಾದಿ ಶರಣರ ವಿಚಾರ, ಸಂದೇಶಗಳನ್ನು ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಎಚ್ಕೆಇ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ, ಉದ್ಯಮಿ ಭೀಮಾಶಂಕರ ಬಿಲಗುಂದಿ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ ಹಾಗೂ ಕಾಯಕ ಶರಣರ ಒಕ್ಕೂಟದ ಸಹಯೋಗದಲ್ಲಿ ನಗರದ ಜಗತ್ ವೃತ್ತದ ಬಳಿ ಇರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಸೋಮವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಹುತ್ವದ ಹಿನ್ನೆಲೆ ಹೊಂದಿರುವ ಲಿಂಗಾಯತ ಸಮಾಜ ಅನೇಕ ಉಪ ಪಂಗಡಗಳಿಂದ ಛಿದ್ರಗೊಂಡಿದ್ದು, ಶರಣರ ಕನಸಿನ ಸಮಾಜ ಕಟ್ಟಲು ತಂದೆ ತಾಯಿಗಳು ಮಕ್ಕಳಿಗೆ, ಯುವಕರಿಗೆ ಪ್ರೇರಣೆ ನೀಡಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಬಸವರಾಜ ಸಾದರ ಅವರು ' ವರ್ತಮಾನಕ್ಕೂ ವಚನ' ವಿಷಯ ಕುರಿತು ಮಾತನಾಡಿ, ಬಸವಣ್ಣನವರು ರಾಜಬೀದಿ, ರಾಜತೇಜ ಹಾಗೂ ಭಕ್ತಿ ಈ ಮೂರು ಪದಗಳನ್ನು ಬಳಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದರು. ಆ ಮೂಲಕ ರಾಜಕೀಯ ಸಿದ್ಧಾಂತವನ್ನು ರೂಪಿಸಿದರು ಎಂದರು.
ಈ ದೇಶದ ಆಪೋಶನ ಶಕ್ತಿಯನ್ನು ಬಹಳ ಚೆನ್ನಾಗಿಯೇ ಅರಿತಿದ್ದ ಬಸವಣ್ಣ ತಾನು ಹುಟ್ಟಿದ ಜಾತಿ ನಿರಾಕರಣೆ ಮಾಡಿ, ಕೆಳವರ್ಗದವರ ಜೊತೆ ಸಮೀಕರಣ ಮಾಡಿಕೊಂಡರು. ಒಳಗೊಳ್ಳುವ ಸಂಸ್ಕೃತಿಯನ್ನು ಕಟ್ಟಿಕೊಡುವ ಮೂಲಕ ಸಮ ಸಮಾಜದ ಬಸವಣ್ಣ ಕಟ್ಟಿಕೊಟ್ಟರು ಎಂದು ಹೇಳಿದರು.
ಸ್ಥಗಿತ ಸ್ಥಿತಿಯನ್ನು ಪ್ರಶ್ನಿಸುವುದನ್ನು ಕಲಿಸಿದ ಬಸವಣ್ಣನವರು, ಸ್ತ್ರೀಯರಿಗೆ ಅಸ್ಮಿತೆ ಒದಗಿಸಿದ್ದಲ್ಲದೆ ಮಹಿಳೆಗೆ ಘನತೆಯ ಬದುಕನ್ನು ಒದಗಿಸಿಕೊಟ್ಟರು. ಮತ ಮಾರಾಟದ ವಸ್ತುವಾಗಿದ್ದರಿಂದ ಇಂದು ದೇಶಾದ್ಯಂತ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ ಎಂದರು.
ಬಸವಣ್ಣನವರ ಆರಾಧನೆಯ ಜೊತೆಗೆ ತತ್ವ ಪಾಲನೆ ಅಗತ್ಯ. ಆತ್ಮಸಾಕ್ಷಿಯಾಗಿ ನಡೆದುಕೊಳ್ಳಬೇಕು ಅಂದಾಗ ಮಾತ್ರ ಬಸವ ಪರಂಪರೆ ಮುಂದುವರಿಯಲು ಸಾಧ್ಯ ಎಂದು ತಿಳಿಸಿದರು.
ರಾಜಕಾರಣಿಗಳು ಕಾಯಕ ವಿಶ್ವವಿದ್ಯಾಲಯ ಆರಂಭಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ಕೊಡುವ ಹಕ್ಕೊತ್ತಾಯ ನಮ್ಮದಾಗಬೇಕು. ಆಗ ಮಾತ್ರ ಯುವ ಜನಾಂಗಕ್ಕೆ ದಾರಿಯಾಗಲಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಮರಾವ ಪ್ಯಾಟಿ ಮಾತನಾಡಿ, ಬಸವಣ್ಣನವರಂತೆ ಎಲ್ಲರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಸಂಸ್ಕೃತಿ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಭಾಲ್ಕಿ ಹಿರೇಮಠದ ಮಹಾಲಿಂಗ ಶರಣರು ಸಾನ್ನಿಧ್ಯ ವಹಿಸಿದ್ದರು. ಜಾಗತಿಕ ಲಿಂಗಾಯತ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಕೆ.ಎ. ಕಲಬುರಗಿ ಷಟಸ್ಥಲ ಧ್ವಜಾರೋಹಣ ಮಾಡಿದರು. ಕಾಶಿರಾಯ ನಂದೂರಕರ್, ನೀಲಕಂಠ ಜಮಾದಾರ, ಎಸ್.ಎ. ನಿಂಗಪ್ಪ, ಶಿವರಾಯ ಮಾಲಿಪಾಟೀಲ, ಚಿತ್ರಶೇಖರ ಕೇಸೂರ ವೇದಿಕೆಯಲ್ಲಿದ್ದರು.
ಶಶಿಕಾಂತ ಪಸಾರ ಸ್ವಾಗತಿಸಿದರು. ಡಾ.ಶಿವಲೀಲಾ ಚಟ್ನಳ್ಳಿ ನಿರೂಪಿಸಿದರು. ಪ್ರಭುಲಿಂಗ ಮಹಾಗಾಂವಕರ, ಡಾ. ಮೀನಾಕ್ಷಿ ಬಾಳಿ, ಡಾ. ನೀಲಾಂಬಿಕಾ ಪಾಟೀಲ ಶೇರಿಕಾರ, ರವೀಂದ್ರ ಶಾಬಾದಿ, ಡಾ. ಗಣಪತಿ ಸಿನ್ನೂರ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಇತರರಿದ್ದರು.