

ಚನ್ನರಾಯಪಟ್ಟಣ : ಅರ್ಹ ಫಲಾನುಭವಿಗಳಿಗೆ ಸೇರಬೇಕಾದ ಸರ್ಕಾರದ ಬಸವ ವಸತಿ ಯೋಜನೆಯ ಮನೆಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ತಮಗೆ ಬೇಕಾದವರಿಗೆ ಹಂಚಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಸಿ.ಆರ್.ಚಿದಾನಂದ್ ಆರೋಪಿಸಿದರು.
ಬಿಜೆಪಿ ಸರ್ಕಾರದಿಂದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ 36 ಪಂಚಾಯತಿಗಳಿಗೆ ಒಟ್ಟು 1400 ಮನೆಗಳು ಮಂಜೂರಾಗಿದ್ದು ಜನಪ್ರತಿನಿಧಿಗಳ ಹಿಂಬಾಲಕರ ಪಾಲಾಗಿವೆ ಎಂದು ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೂರ್ವ ಮುಂಗಾರಿನಲ್ಲಿ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ಸುಮಾರು 150 ಮನೆಗಳು ಹಾನಿಗೊಳಗಾಗಿವೆ. ಮನೆ ಕಳೆದುಕೊಂಡವರು ಅರ್ಜಿ ನೀಡಿದರೂ ಸಹ ಮನೆ ಭಾಗ್ಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪರಿಶೀಲಿಸಿ ನಡೆಸಿ 15 ದಿನದಲ್ಲಿ ಅಧಿಕಾರಿಗಳು ಕ್ರಮ ವಹಿಸಿದಿದ್ದರೆ ನಂತರದ ದಿನವೇ ತಾಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ ಪಂಚಾಯಿತಿಗಳಲ್ಲಿ ಇ-ಸ್ವತ್ತು ಮಾಡಿಕೊಡಲು ಲಂಚದ ಬೇಡಿಕೆ ಹೆಚ್ಚಾಗಿದೆ. ತಾಲೂಕಿನ ಬಹುತೇಕ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಮಳೆಯಿಂದ ಮನೆ ಹಾನಿಗೊಳಗಾದ ಸಾಕಷ್ಟು ಕುಟುಂಬಗಳಿಗೆ ವೈಯಕ್ತಿಕವಾಗಿ ಆರ್ಥಿಕ ಸಹಕಾರ ನೀಡಲಾಗಿದೆ. ಸರ್ಕಾರದಿಂದ ನಿಜ ಫಲಾನುಭವಿಗಳಿಗೆ ಪರಿಹಾರ ಕಲ್ಪಿಸುವುದೇ ನಮ್ಮ ಗುರಿಯಾಗಿದೆ. ಅಧಿಕಾರಿಗಳು ಸ್ವಂದಿಸದಿದ್ದರೆ ಪ್ರತಿಭಟನೆಯೇ ಅಸ್ತ್ರ ಎಂದರು.
ಸುದ್ದಿಗೋಷ್ಟಿಯಲ್ಲಿ ಶಾಂತರಾಜ್, ರೇಣುಕ ಪ್ರಸಾದ್, ರೂಪೇಶ್, ಶಿವಕುಮಾರ್, ದಿಡಗ ಬಸವರಾಜ್ ಇದ್ದರು.