ಬಸವ ವಚನ ನೃತ್ಯರೂಪಕ 21ರಂದು

a85d5542-6a17-4feb-8cc9-e494c3465ce8
Published on

ಬೀದರ್: ಮಹಾತ್ಮ ಬಸವೇಶ್ವರರ ಚಿಂತನೆಗಳನ್ನು ಯುವಪೀಳಿಗೆಗೆ ಪರಿಚಯಿಸುವ ಸದಾಶಯದಿಂದ ದೇಶಾದ್ಯಂತ ಸಂಚರಿಸುತ್ತಿರುವ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದಿಂದ ನೀನಲ್ಲದೆ ಮತ್ತಾರೂ ಇಲ್ಲವಯ್ಯ ವಿಶಿಷ್ಟ ನೃತ್ಯರೂಪಕ ಆ.21ರಂದು ಸಂಜೆ 6ಕ್ಕೆ ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಬಸವ ಚಿಂತನೆಗಳನ್ನು ದೇಶಾದ್ಯಂತ ಮುಟ್ಟಿಸುವ ನಿಟ್ಟಿನಲ್ಲಿ ಕನ್ನಡದ ವಚನಗಳನ್ನು ಹಿಂದಿ ಭಾಷೆಗೆ ಅನುವಾದಿಸಿ ನೃತ್ಯರೂಪಕ ಸಿದ್ಧಪಡಿಸಲಾಗಿದೆ. ಹಲವು ರಾಜ್ಯಗಳಿಗೆ ಸಂಚರಿಸಿ ಕಾರ್ಯಕ್ರಮ ನೀಡಿದ ತಂಡ ಶರಣರ ನಾಡಿಗೆ ಆಗಮಿಸುತ್ತಿದ್ದು, ಭವ್ಯ ಸ್ವಾಗತ ಕೋರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಬಸವದಳ ಅಧ್ಯಕ್ಷ ಬಸವರಾಜ ಧನ್ನೂರ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷ ವಿಜಯಕುಮಾರ ಸೋನಾರೆ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೃತ್ಯರೂಪಕಕ್ಕೆ ಚಾಲನೆ ನೀಡುವರು. ಕೇಂದ್ರ ಸಚಿವ ಭಗವಂತ ಖೂಬಾ, ಪೌರಾಡಳಿತ ಸಚಿವ ರಹೀಮ್ ಖಾನ್ ಸೇರಿ ಜಿಲ್ಲೆಯ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. 55 ನಿಮಿಷದ ಈ ರೂಪಕ ಸಂಪೂರ್ಣ ಉಚಿತ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದು ಕೋರಿದರು.
ಕನ್ನಡದ ವಚನಗಳಿಗೆ ನೀಡಿದ ಸಿ.ಅಶ್ವಥ್ ಅವರ ಮೂಲ ಸಂಗೀತವನ್ನೇ ಆಧಾರವಾಗಿಸಿಕೊಂಡು ಹಿಂದಿಯಲ್ಲಿ ಧ್ವನಿ ಮುದ್ರಿಸಲಾಗಿದೆ. ಈ ತಂಡದಲ್ಲಿ ಶಾಸ್ತ್ರೀಯ ನೃತ್ಯ ಬಲ್ಲ 24 ಕಲಾವಿದೆಯರು ವಚನಗಳಿಗೆ ನೃತ್ಯ ಮಾಡುವರು. ದೇಶದ ಸುಮಾರು 14 ರಾಜ್ಯಗಳ ಪ್ರಮುಖ 25 ನಗರಗಳಲ್ಲಿ 60ಕ್ಕೂ ಅಧಿಕ ಪ್ರದರ್ಶನ ನೀಡುತ್ತಿರುವ ತಂಡ, ಉತ್ತರ ಭಾರತದ ಬಳಿಕ ಇದೀಗ ದಕ್ಷಿಣ ಭಾರತದಲ್ಲಿ ಪ್ರವಾಸ ಕೈಗೊಂಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾದ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಸುನೀಲ ಕಡ್ಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net