

ಸರಗೂರು: ತಾಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಶುಕ್ರವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ಮನೆಯಲ್ಲಿ ಭೇಟಿ ಮಾಡಿ ಬಸವ ಭವನಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವೀರಭದ್ರಪ್ಪ, ತಾಲೂಕಿನ ನಮ್ಮ ಸಮಾಜದ ವತಿಯಿಂದ ಎಲ್ಲ ಗ್ರಾಮಗಳಲ್ಲಿ ಚಂದಾ ವಸೂಲಿ ಮಾಡಿ ಪಟ್ಟಣದಲ್ಲಿ ಬಸವ ಭವನ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಭವನಕ್ಕೆ ಅಂದಾಜು 8 ರಿಂದ 10 ಕೋಟಿ ಅನುದಾನ ಬೇಕಾಗಿದೆ. ಆದ್ದರಿಂದ ಸರ್ಕಾರದ ಮಟ್ಟದಲ್ಲಿ ನಮ್ಮ ಸಮಾಜಕ್ಕೆ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಒಳಗೊಂಡಂತೆ ಬಸವ ಭವನಕ್ಕೆ ಅನುದಾನ ಬಿಡುಗಡೆ ಮಾಡಿಸುವಂತೆ ಸಚಿವರಲ್ಲಿ ಮನವಿ ಮಾಡಿದ್ದೇವೆ ಎಂದರು.
ಈ ಬಗ್ಗೆ ಸಚಿವ ಮಹದೇವಪ್ಪ ಅವರು ಬಸವ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿ ಅನುದಾನ ಕೊಡಿಸುವ ಭರವಸೆ ನೀಡುವುದರ ಜತೆಗೆ ತಾವೇ ಬಂದು ಬಸವ ಭವನಕ್ಕೆ ಭೂಮಿ ಪೂಜೆ ಮಾಡುವುದಾಗಿಯೂ ತಿಳಿಸಿದ್ದಾರೆ ಎಂದರು.
ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮುನುಗನಹಳ್ಳಿ ಗುರುಸ್ವಾಮಿ, ಕಾರ್ಯಾಧ್ಯಕ್ಷ ಗಿರೀಶ್, ಬಸವ ಬಳಗ ಅಧ್ಯಕ್ಷ ಗಣಪತಿ, ಅಣ್ಣಯ್ಯಸ್ವಾಮಿ, ತರಗನಹಳ್ಳಿ ನಂಜುಂಡಸ್ವಾಮಿ, ಮಾದಪ್ಪ, ಸಿದ್ದಪ್ಪ, ರಾಜಪ್ಪ, ಪರಶಿವಮೂರ್ತಿ, ಜಯಕುಮಾರ್ ಇತರರಿದ್ದರು.