

ಭಾಲ್ಕಿ: ದಾಡಗಿ ಕ್ರಾಸ್ ಹತ್ತಿರ ಕಿಡಿಗೇಡಿಗಳು ಬಸವಣ್ಣನವರ ಪ್ರತಿಮೆ ವಿರೂಪಗೊಳಿಸಿದ್ದನ್ನು ಖಂಡಿಸಿ ಬುಧವಾರ ಗ್ರಾಮಸ್ಥರು ಹಾಗೂ ಬಸವ ಭಕ್ತರು ಹುಮನಾಬಾದ್-ಭಾಲ್ಕಿ-ಬಸವಕಲ್ಯಾಣ ಮಾರ್ಗದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬಸವಣ್ಣನವರ ಪ್ರತಿಮೆಯ ಕೈಗಳನ್ನು ಕತ್ತರಿಸಿ, ಷಟಸ್ಥಲ ಧ್ವಜಾರೋಹಣ ಬೀಳಿಸಿದ್ದನ್ನು ನೋಡಿದ ಗ್ರಾಮಸ್ಥರು ಪ್ರತಿಭಟನೆಗೆ ಇಳಿದರು. ಇವರೊಂದಿಗೆ ತಾಲೂಕಿನ ಬಸವಭಕ್ತರು ಕೈಜೋಡಿಸಿದರು. ಪರಿಸ್ಥಿತಿ ತಿಳಿದ ಭಾಲ್ಕಿ ಉಪವಿಭಾಗದ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಮತ್ತು ಖಟಕಚಿಂಚೋಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ನಿಲ್ಲಿಸಲು ಪ್ರಯತ್ನಿಸಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಮನವಿ ಪತ್ರಸ್ವೀಕರಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಬಸವಭಕ್ತರಾದ ಕಿರಣಕುಮಾರ ಖಂಡ್ರೆ, ನಾಗಶೆಟ್ಟಿ ಚೋಳಾ, ವಿಲಾಸ ಪಾಟೀಲ, ನ್ಯಾಯವಾದಿ ಸಿದ್ದು ಪಾಟೀಲ, ಅಶೋಕ ಪಾಂಚಾಳ, ಬಸವರಾಜ ಹುಡಗೆ, ಬಸವರಾಜ ಮಾಕಾ, ಆನಂದ, ಕಲ್ಯಾಣರಾವ ಕುಂಬಾರಗೆರೆ, ನಂದಕುಮಾರ, ಜೀತು ಪಾಟೀಲ, ಕಿಶೋರ, ಮಹೇಶ ಧುಳೆ ನೂರಾರು ಸಂಖೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಖಂಡನೆ: ಬಸವಣ್ಣನವರ ಪ್ರತಿಮೆಯನ್ನು ವಿರೂಪ ಗೊಳಿಸಿದ್ದನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ರೈತ ಮುಖಂಡರಾದ ನಾಗಶೆಟ್ಟೆಪ್ಪ ಲಂಜವಾಡೆ, ಕಾಶಿನಾಥ ಭೂರೆ, ವಿಠಲರಾವ ಬಿರಾದಾರ, ಹಿರೇಮಠ ಸಂಸ್ಥಾನ ಚಿಂತನಾ ವೇದಿಕೆಯ ವಿಶ್ವನಾಥಪ್ಪ ಬಿರಾದಾರ, ಶರಣಪ್ಪ ಬಿರಾದಾರ ತೀವ್ರವಾಗಿ ಖಂಡಿಸಿದ್ದಾರೆ.