

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಇಲ್ಲಿಯ ಬಸವ ವನದಲ್ಲಿರುವ ಜಗಜ್ಯೋತಿ ಬಸವೇಶ್ವರರ ಅಶ್ವಾರೂಢ ಪ್ರತಿಮೆಯನ್ನು ಫ್ಲೈಓವರ್ ಕಾಮಗಾರಿ ಪೂರ್ಣಗೊಳ್ಳುವವರೆಗೂ ಸಮೀಪದ ಇಂದಿರಾ ಗಾಜಿನ ಮನೆ ಆವರಣಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ.
ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಬಸವ ಪರ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಜಾಗತಿಕ ಲಿಂಗಾಯತ ಮಹಾಸಭಾದ ಎಂ.ವಿ. ಗೊಂಗಡಶೆಟ್ಟಿ ಅವರು ಮಾತನಾಡಿ, ಬಸವ ಪ್ರತಿಮೆ ಸ್ಥಳಾಂತರ ಬೇಡ. ಇರುವ ಜಾಗದಲ್ಲಿ ಎತ್ತರದಲ್ಲಿ ಪ್ರತಿಷ್ಠಾಪನೆಗೆ ವ್ಯವಸ್ಥೆ ಮಾಡಬೇಕು. ಮೊದಲ ಎರಡು ಮಹಡಿಯಲ್ಲಿ ಬಸವ ತತ್ವ ಪ್ರಸಾರ ಹಾಗೂ ಕಾರ್ಯಕ್ರಮಗಳಿಗೆ ಹಾಲ್ ನಿರ್ವಿುಸಿ ಅದರ ಮೇಲೆ ಪ್ರತಿಮೆ ಸ್ಥಾಪಿಸಬೇಕು. ಜತೆಯಲ್ಲೇ ಫ್ಲೈಓವರ್ ಕೆಲಸವನ್ನೂ ಮಾಡಬಹುದು. ಇದರ ಬಗ್ಗೆ ತಜ್ಞರ ಸಲಹೆ ಪಡೆದು ಮುಂದಡಿ ಇಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಬಹುತೇಕ ಬಸವ ಪರ ಸಂಘಟನೆ ಪದಾಧಿಕಾರಿಗಳು ಧ್ವನಿಗೂಡಿಸಿದರು.
ಪ್ರಕಾಶ ಬೆಂಡಿಗೇರಿ ಮಾತನಾಡಿ, ಎರಡು ಬದಿಯ ಫ್ಲೈಓವರ್ ಮಧ್ಯದಲ್ಲಿ ಸ್ಥಾಪಿಸಿದರೆ ಇಕ್ಕಟ್ಟಾದ ಜಾಗದಲ್ಲಿ ಬಸವ ಮೂರ್ತಿ ಕಾಣುವುದಿಲ್ಲ. ಎತ್ತರದಲ್ಲಿ ಪ್ರತಿಷ್ಠಾಪಿಸಬೇಕು ಎಂದರು.
ರಾಜಶೇಖರ ಮೆಣಸಿನಕಾಯಿ ಮಾತನಾಡಿ, ಬಸವ ವನದಲ್ಲಿ ಪ್ರತಿಮೆ ಮಾತ್ರವಲ್ಲ, ಬಸವ ಧರ್ಮ ಪ್ರಸಾರ ಕಾರ್ಯವೂ ಆಗಬೇಕು. ಇದಕ್ಕಾಗಿ ಜಿಲ್ಲಾಡಳಿತ ಸೂಕ್ತ ನೀಲಿನಕ್ಷೆಯನ್ನು ಸಿದ್ಧಪಡಿಸಬೇಕು. ಸಮಾಜದ ಎಲ್ಲ ಮುಖಂಡರಿಗೆ ನೀಲಿನಕ್ಷೆಯನ್ನು ತೋರಿಸಿ ಒಪ್ಪಿಗೆ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ಮೊದಲು ಮೂರ್ತಿ ಸ್ಥಳಾಂತರ ಮಾಡೋಣ. ಆ ನಂತರ ಸಾಕಷ್ಟು ಸಮಯಾವಕಾಶ ಇರುತ್ತದೆ. ಸಮರ್ಪಕ ನೀಲಿ ನಕ್ಷೆ ಸಿದ್ಧಪಡಿಸಿ ಸಮಾಜದ ಎಲ್ಲರ ಅಭಿಪ್ರಾಯ ಪಡೆದು ಅಂತಿಮವಾಗಿ ಮೂರ್ತಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳೋಣ ಎಂದರು.
ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಇಂದಿರಾ ಗಾಜಿನ ಮನೆ ಆವರಣದ ಸೂಕ್ತ ಸ್ಥಳದಲ್ಲಿ ಮೊದಲು ಮೂರ್ತಿ ಸ್ಥಳಾಂತರ ಮಾಡಬೇಕು. ಆ ನಂತರ ಬಸವ ವನದಲ್ಲಿ ಫ್ಲೈಓವರ್ಗಿಂತಲೂ ಎತ್ತರದಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯ ಹಣಕಾಸಿನ ವ್ಯವಸ್ಥೆಯನ್ನೂ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಫ್ಲೈಓವರ್ಗಾಗಿ ನಾಲ್ಕು ಕಡೆ ರಸ್ತೆ ಬರುವುದರಿಂದ ಮೂರ್ತಿ ಅಲ್ಲೇ ಇಟ್ಟುಕೊಂಡು ಕೆಲಸ ಮಾಡುವುದು ಕಷ್ಟವಾಗಿದೆ. ಹಾಗಾಗಿ ಸ್ಥಳಾಂತರ ಅನಿವಾರ್ಯವಾಗಿದೆ. ಕಾಮಗಾರಿ ಮುಗಿದ ತಕ್ಷಣ ಪುನಃ ಬಸವ ವನದಲ್ಲಿ ಪ್ರತಿಷ್ಠಾಪನೆಗೆ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎಂಎಲ್ಸಿ ಪ್ರದೀಪ ಶೆಟ್ಟರ್, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ, ಸಂತೋಷ ಚವ್ಹಾಣ, ಮೀನಾಕ್ಷಿ ವಂಟಮೂರಿ, ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ಮುಖಂಡರಾದ ಲಿಂಗರಾಜ ಪಾಟೀಲ, ವೀರೇಶ ಸಂಗಳದ, ಬಸವರಾಜ ಯಕಲಾಸಪುರ, ಸುರೇಶ ಹೊರಕೇರಿ, ಇತರರು ಪಾಲ್ಗೊಂಡಿದ್ದರು.