ಬಸವ ನೆಲದಲ್ಲಿ ನಾರಾಯಣರಾವ್ ಲೀನ

funeral-1
Published on

ವಿಜಯವಾಣಿ ಸುದ್ದಿಜಾಲ ಬೀದರ್/ಬಸವಕಲ್ಯಾಣ

ಕರೊನಾ ಸೋಂಕಿಗೆ ಬಲಿಯಾದ ಶಾಸಕ ಬಿ. ನಾರಾಯಣರಾವ್(65) ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ಬಸವಕಲ್ಯಾಣ ಹೊರವಲಯದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮ ಪಕ್ಕದ ಖಾಸಗಿ ಲೇಔಟ್ ನಲ್ಲಿ ಅಪಾರ ಅಭಿಮಾನಿಗಳ ಅಶ್ರುತರ್ಪಣದ ಮಧ್ಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಕೋಲಿ/ಕಬ್ಬಲಿಗ ಸಮಾಜದ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಯಿತು. ಪುತ್ರರಾದ ಗೌತಮ್ ಹಾಗೂ ರಾಹುಲ್ ಸಮಾಧಿಯಲ್ಲಿ ಇರಿಸಿದ ಪಾರ್ಥಿವ ಶರೀರದ ಮೇಲೆ ಮುಷ್ಠಿಯಿಂದ ಮಣ್ಣು ಹಾಕುವ ಮೂಲಕ ಅಂತಿಮ ವಿಧಿಯ ಪ್ರಕ್ರಿಯೆ ಪೂರ್ಣಗೊಳಿಸಿದರು. ಕೋವಿಡ್ ನಿಯಮದಂತೆ ಅಂತ್ಯಕ್ರಿಯೆ ನಡೆಸಿದ್ದರಿಂದ ಸೀಮಿತ ಜನರಿಗೆ ಒಳಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಅಪಾರ ಅಭಿಮಾನಿಗಳು ದೂರ ದೂರದಲ್ಲಿ ನಿಂತು ಕಣ್ಣೀರು ಸುರಿಸುತ್ತ ನೆಚ್ಚಿನ ನಾಯಕನಿಗೆ ಅಂತಿಮ ವಿದಾಯ ಹೇಳಿದರು.

ನಾರಾಯಣರಾವ್ ಮೂಲತಃ ಬೀದರ್ ತಾಲೂಕಿನ ಬಸಂತಪುರ ಗ್ರಾಮದವರು. ಆದರೆ ಅವರಿಗೆ ಕಲ್ಯಾಣ ಕ್ಷೇತ್ರ ನೆಲೆ ಕೊಟ್ಟಿತ್ತು. ನಾನು ಸತ್ತರೆ ಅಂತ್ಯಕ್ರಿಯೆ ಬಸವಕಲ್ಯಾಣದಲ್ಲೇ ಮಾಡಬೇಕೆಂಬ ಅವರ ಇಚ್ಛೆಯಂತೆ ಕುಟುಂಬದವರು ಇಲ್ಲಿ ಈ ಪ್ರಕ್ರಿಯೆ ನೆರವೇರಿಸಿದರು. ನಾಲ್ಕು ದಶಕಗಳ ಸುದೀರ್ಘ ಹೋರಾಟ ಮೂಲಕ ಹಿಂದುಳಿದ ವರ್ಗದ ನಾಯಕರಾಗಿ ಜನಮಾನಸದಲ್ಲಿ ಮನೆ ಮಾಡಿದ್ದ ಅವರು, ಮೊದಲ ಸಲ ಶಾಸಕನಾಗಿ ಆರಿಸಿ ಕಳಿಸಿದಂತಹ ಬಸವನಾಡಿನ ಪುಣ್ಯ ನೆಲದಲ್ಲಿನ ಪಂಚ ಭೂತಗಳಲ್ಲಿ ಲೀನಗೊಂಡರು.

ಕರೊನಾ ಸೋಂಕಿನಿಂದ ಬಳಲುತ್ತ ಸೆ.1ರಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾರಾಯಣರಾವ್ ಗುರುವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದರು. ಸಾರ್ವಜನಿಕ ಜೀವನದಲ್ಲಿ 40 ವರ್ಷ ಸುದೀರ್ಘ ಹೋರಾಟ ಮಾಡಿದ್ದವರು, ಕಣ್ಣಿಗೆ ಕಾಣದ ಕರೊನಾ ವೈರಸ್ ನೊಂದಿಗೆ 23 ದಿನದ ಸಂಘರ್ಷದಲ್ಲೇ ಸೋಲೋಪ್ಪಿಕೊಂಡು ಬಾರದ ಲೋಕಕ್ಕೆ ತೆರಳಿದರು. ಆಂಬುಲೆನ್ಸ್ ನಲ್ಲಿ ಶುಕ್ರವಾರ ಮಧ್ಯಾಹ್ನ ಪಾರ್ಥಿವ ಶರೀರ ಬಸವಕಲ್ಯಾಣಕ್ಕೆ ತರಲಾಯಿತು. ಕೋವಿಡ್ ಮಾರ್ಗಸೂಚಿಯಂತೆ ಎಲ್ಲೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡದೆ ನೇರವಾಗಿ ಅಂತ್ಯಕ್ರಿಯೆ ಸ್ಥಳಕ್ಕೆ ಒಯ್ಯಲಾಯಿತು.

ಹಾರಕೂಡದ ಶ್ರೀ ಡಾ.ಚೆನ್ನವೀರ ಶಿವಾಚಾರ್ಯ, ಭಾಲ್ಕಿ ಹಿರೇಮಠದ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ರತ್ನಾಕರ ಗುರೂಜಿ, ಸಂಸದರಾದ ಭಗವಂತ ಖೂಬಾ, ಡಾ.ಉಮೇಶ ಜಾಧವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಯು.ಟಿ. ಖಾದರ್, ರಾಜಶೇಖರ ಪಾಟೀಲ್, ಬಂಡೆಪ್ಪ ಖಾಶೆಂಪುರ, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಡಾ.ಚಂದ್ರಶೇಖರ ಪಾಟೀಲ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ತಿಪ್ಪಣ್ಣ ಕಮಕನೂರ, ಪ್ರಮುಖರಾದ ನರಸಿಂಗರಾವ ಸೂರ್ಯವಂಶಿ, ಲಕ್ಷ್ಮಣ ಬುಳ್ಳಾ, ನೀಲಕಂಠ ರಾಠೋಡ್, ಶರಣು ಸಲಗರ, ಬಾಬು ಹೊನ್ನಾನಾಯಕ, ಮೀರ್ ಅಜರಲಿ ನವರಂಗ್, ರವಿ ಗಾಯಕವಾಡ, ಆನಂದ ಪಾಟೀಲ್, ಈಶ್ವರ ಬೊಕ್ಕೆ, ಆನಂದ ದೇವಪ್ಪ, ಬಸವರಾಜ ಸ್ವಾಮಿ, ಸಂಜಯಸಿಂಗ್ ಹಜಾರಿ, ಬಸವರಾಜ ಬುಳ್ಳಾ, ತಹಸಿನ್ ಅಲಿ ಜಮಾದಾರ್, ರೈಸೋದ್ದಿನ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು. ನಾರಾಯಣರಾವ್ ಪತ್ನಿ ಮಲ್ಲಮ್ಮ ರೋದನ ಹೃದಯಹಿಂಡುತ್ತಿತ್ತು. ಎಲ್ಲರೂ ಎಷ್ಟೇ ಸಮಾಧಾನ, ಸಾಂತ್ವನ ಹೇಳುತ್ತಿದ್ದರೂ ಕಣ್ಣೀರ ಧಾರೆ ನಿಲ್ಲಲಿಲ್ಲ.

ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ರಾಮಚಂದ್ರನ್, ಎಸ್ಪಿ ನಾಗೇಶ್, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ತಾಲೂಕು ಆಡಳಿತದ ಪರವಾಗಿ ಎಸಿ ಪಾಟೀಲ್ ಭುವನೇಶ, ತಹಸೀಲ್ದಾರ್ ಸಾವಿತ್ರಿ ಸಲಗರ, ನಗರಸಭೆ ಆಯುಕ್ತ ಗೌತಮ ಕಾಂಬಳೆ ಪುಷ್ಪಗುಚ್ಛವಿರಿಸಿ ಅಂತಿಮ ಗೌರವ ಸಲ್ಲಿಸಿದರು. ಮೃತರ ಗೌರವಾರ್ಥ ಪೊಲೀಸ್ ತಂಡದಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶಾಸಕರ ನಿಧನದಿಂದಾಗಿ ನಗರದ ಹಲವರು ಸ್ವಯಂ ಇಚ್ಛೆಯಿಂದ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿದ್ದರು. ಶೋಕದ ವಾತಾವರಣ ಸೃಷ್ಟಿಯಾಗಿತ್ತು.

ದೂರದಿಂದಲೇ ನೋಡುತ್ತ
ಕಣ್ಣೀರಿಟ್ಟ ಅಭಿಮಾನಿಗಳು

ಕೋವಿಡ್ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಸೀಮಿತ ಜನರಿಗೆ ಅವಕಾಶ ನೀಡಲಾಗಿತ್ತು. ಸುತ್ತಲೂ ಬ್ಯಾರಿಕೇಡ್ಸ್ ಅಳವಡಿಸಲಾಗಿತ್ತು. ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಬಂದರೂ ಪೊಲೀಸರು ಒಳಗೆ ಬಿಡಲಿಲ್ಲ. ಹೀಗಾಗಿ ದೂರದಲ್ಲಿ ನಿಂತು ನೆಚ್ಚಿನ ನಾಯಕನಿಗೆ ಅಂತಿಮ ವಿದಾಯ ಹೇಳಿದರು. ಅನೇಕರು ಕಣ್ಣೀರಿಟ್ಟು ತಮ್ಮ ಪ್ರೀತಿಯ ಜನಪ್ರತಿನಿಧಿ ನಿಧನಕ್ಕೆ ಮಮ್ಮಲ ಮರುಗಿದರು. ಸರಳರಲ್ಲೇ ಅತಿ ಸರಳ ವ್ಯಕ್ತಿತ್ವ ಹೊಂದಿದ್ದ ಕಾರಣ ನಾರಾಯಣರಾವ್ ಬಡವರ ಪಾಲಿಗೆ ಅತ್ಯಾಪ್ತ ನಾಯಕರಾಗಿದ್ದರು. ಹೀಗಾಗಿ ಅನೇಕ ಬಡಪಾಯಿಗಳು ಬೆಳಗ್ಗೆಯೇ ಇಲ್ಲಿಗೆ ಬಂದಿದ್ದರು. ಪಾರ್ಥಿವ ಶರೀರ ಹೊತ್ತ ಆಂಬುಲೆನ್ಸ್ ಇತ್ತ ಬರುತ್ತಲೇ ಹೋದನಪ್ಪೋ ನಮ್ ರಾಜಾ ಎನ್ನುತ್ತ ಗಳೋ ಎಂದು ಅಳಲಾರಂಭಿಸಿದರು. ಸುತ್ತಮುತ್ತ ನೆರೆದಿದ್ದ ಸಾವಿರಾರು ಜನರು ಅಂತ್ಯಕ್ರಿಯೆ ವಿಧಿ ವಿಧಾನ ಮುಗಿಯುವವರೆಗೂ ತಮ್ಮ ಜಾಗದಿಂದ ಕದಲಿಲ್ಲ. ಕೆಲವರು ಕೊನೆಯ ಬಾರಿ ತಮ್ಮ ನಾಯಕನ ಮುಖ ನೋಡಬೇಕೆಂದು ಅಕ್ಕಪಕ್ಕದ ಗಿಡ, ಮರಗಳನ್ನು ಹತ್ತಿ ಕುಳಿತಿದ್ದರು.

ಅವರ ಕನಸು ನನಸಾಗಿಸೋಣ…
ನಾರಾಯಣರಾವ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಹುತೇಕ ಜನಪ್ರತಿನಿಧಿಗಳು, ನೂತನ ಅನುಭವ ಮಂಟಪ ಕೆಲಸಕ್ಕೆ ಬೇಗ ಚಾಲನೆ ಕೊಡಬೇಕು. ರಾಷ್ಟ್ರಪತಿಗಳಿಂದಲೇ ಇದರ ಅಡಿಗಲ್ಲು ನೆರವೇರಬೇಕು. ಬಸವಕಲ್ಯಾಣ ಅಂತಾರಾಷ್ಟ್ರೀಯ ಪ್ರವಾಸಿ, ಅಧ್ಯಾತ್ಮಿಕ ತಾಣವಾಗಬೇಕೆಂಬ ಅವರ ಕನಸು ನನಸುಗೊಳಿಸಲು ಪಕ್ಷಭೇದ ಮರೆತು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಜಾತಿ ಮತ್ತು ಪಕ್ಷಭೇದ ಮಾಡದೆ ಜನರ ಸಮಸ್ಯೆ ಬಗೆಹರಿಸುವ ವಿಶಿಷ್ಟ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದರು. ನೊಂದವರಿಗೆ ನ್ಯಾಯ ಒದಗಿಸುವುದು, ಕಷ್ಟದಲ್ಲಿದ್ದವರಿಗೆ ನೆರವಾಗುವುದೇ ಅವರ ಧ್ಯೇಯ ಆಗಿತ್ತು. ಹೀಗಾಗಿ ಜಿಲ್ಲೆಯ ರಾಜಕಾರಣಿಗಳಲ್ಲಿ ಅವರೊಬ್ಬ ಅಜಾತಶತ್ರು ಆಗಿದ್ದರು. ಅವರ ಕನಸುಗಳು ನನಸುಗೊಳಿಸಿ ನಿಜವಾದ ಶ್ರದ್ಧಾಂಜಲಿ ಅರ್ಪಿಸೋಣ ಎಂದರು.

ರಾಹುಲ್ ಗಾಂಧಿ ಸಂತಾಪ
ಶಾಸಕ ನಾರಾಯಣರಾವ್ ನಿಧನಕ್ಕೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ನಾರಾಯಣರಾವ್ ಪತ್ನಿ ಮಲ್ಲಮ್ಮ ಹೆಸರಿನಲ್ಲಿ ಶೋಕ ಸಂದೇಶ ಪತ್ರ ರವಾನಿಸಿ, ಇವರ ಅಗಲಿಕೆಯಿಂದ ಪಕ್ಷ ಸಮರ್ಪಣಾ ಭಾವದಿಂದ ದುಡಿಯುತ್ತಿದ್ದ ನಿಷ್ಠಾವಂತ ಮುಖಂಡನನ್ನು ಕಳೆದುಕೊಂಡಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ದಣವರಿಯದೆ ದುಡಿದಿದ್ದಾರೆ. ಯಾವುದೇ ಭೇದಭಾವ ಮಾಡದೆ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ. ಅವರಲ್ಲಿದ್ದ ನಮ್ರತೆ, ಉದಾರತೆ ಗುಣಗಳು ಮಾದರಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net