ಬಸವ ನಾಡಿನಲ್ಲಿ ಅಪ್ಪು ಉತ್ಸವ

1647513407645
Published on

ವಿಜಯಪುರ: ವಿಶ್ವಗುರು ಬಸವನಾಡು ಬಸವನ ಬಾಗೇವಾಡಿ ಪಟ್ಟಣದಲ್ಲಿಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಅಪ್ಪು ಉತ್ಸವ ಎಂದು ಅದ್ದೂರಿಯಾಗಿ ಆಚರಿಸಲಾಯಿತು. ಕರುನಾಡಿನ ಯುವರತ್ನ ದಿವಂಗತ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದೆ ಜೇಮ್ಸ್ ಚಿತ್ರ ತೆರೆಕಂಡಿದೆ. ದೇಶಾದ್ಯಂತ ಬಿಡುಗಡೆ ಆಗಿರುವ ಜೇಮ್ಸ್ ಚಿತ್ರವನ್ನು ವಿಶೇಷವಾಗಿ ಬಸವನ ಬಾಗೇವಾಡಿಯ ಯುವಕರು ಪುನೀತ್ ರಾಜಕುಮಾರ ಜನ್ಮದಿನವನ್ನು ನಗರದ ತುಂಬೆಲ್ಲಾ ಅಪ್ಪು ಉತ್ಸವ ಎಂದು ಆಚರಿಸಿದರು. ಬಸವನ ಬಾಗೇವಾಡಿಯಲ್ಲಿನ ವಿಜಯಪುರ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಕಲ ವಾದ್ಯದೊಂದಿಗೆ ಅದ್ದೂರಿಯಾಗಿ ನಡೆಯಿತು. ಪಟ್ಟಣದ ತುಂಬೆಲ್ಲಾ ಅಪ್ಪು ಭಾವಚಿತ್ರವನ್ನು ನೋಡಿ ಜನರು ಭಾವುಕರಾದರು. ಮೆರವಣಿಗೆ ಅಂತಿಮವಾಗಿ ನಗರದ ಸತ್ಯನಾರಾಯಣ ಚಿತ್ರಮಂದಿರದಲ್ಲಿ 10 ಕೆಜಿ ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಯಿತು. ಅಭಿಮಾನಿಗಳಾದ ಶಿವರಾಜ್ ಸಿಂಗ್ ರಾಜಪೂತ್, ಅಮರ್ ಗಾಯಕ್ವಾಡ್, ಜಗದೀಶ್ ತಳವಾರ್, ಕಂಟುಗೌಡ ಪಾಟೀಲ್, ವಿಶ್ವನಾಥ್ ಹಿರೇಮಠ್, ಅಪ್ಪುನ್ ಗಬ್ಬೂರ್, ಸಚಿನ್ ಉಮರ್ಜಿ ಸೇರಿದಂತೆ ನೂರಾರು ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ರು. ಅಪ್ಪು ಉತ್ಸವಕ್ಕೆ ಶಿವಪ್ರಕಾಶ್ ಹಿರೇಮಠ ಮತ್ತು ಸಿದ್ದಲಿಂಗ ಶ್ರೀಗಳು ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net