ಬಸವ ಧರ್ಮದಂತೆ ಸಮಾನತೆಯಿಂದ ಕಾಣಿರಿ

IMG-20230820-WA0266
ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತಿ ಸಹಯೋಗದಲ್ಲಿ ಕಾರ್ಜುವಳ್ಳಿಯ ಗ್ರಾಮದ ಸಂಸ್ಥಾನ ಹಿರೇಮಠದ ಆವರಣದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಸುಶೀಲಾ ಸೋಮಶೇಖರ್, ಎಂ.ಎನ್. ಕುಮಾರಸ್ವಾಮಿ, ಡಾ.ಎಂ.ಇ.ಜಯರಾಜ್ ಇತರರು ಇದ್ದರು.
Published on

ಆಲೂರು: ಮನುಷ್ಯ ಸಮಾಜ ಜೀವಿಯಾಗಲು ಬಸವ ಧರ್ಮದಂತೆ ಎಲ್ಲರನ್ನೂ ಸಮಾನತೆಯಿಂದ ನಮ್ಮವರೆಂದು ತಿಳಿಯಬೇಕು. ಗಾಳಿ, ಬೆಳಕು, ನೀರಿನಂತೆ ಬದುಕಬೇಕು ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಕಾರ್ಜುವಳ್ಳಿಯ ಗ್ರಾಮದ ಸಂಸ್ಥಾನ ಹಿರೇಮಠದ ಆವರಣದಲ್ಲಿ ಎನ್.ಎ. ಶಶಿಧರ್ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಕಲ್ಯಾಣ ಕ್ರಾಂತಿ ನಂತರ ಬಸವಣ್ಣನವರ ವಚನಗಳು ಪ್ರಚಾರಕ್ಕೆ ಬರಲಿಲ್ಲ. ಮುಂದೆ ಎಡೆಯೂರು ಸಿದ್ದಲಿಂಗೇಶ್ವರರು 15ನೇ ಶತಮಾನದಲ್ಲಿ ವಚನಗಳನ್ನು ಮತ್ತೆ ಪ್ರಚಾರ ಮಾಡಿದರು. ನಂತರ ಫ.ಗು. ಹಳಕಟ್ಟಿ ಅವರು ಹಿತಚಿಂತಕ ಎಂಬ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿ ವಚನಶಾಸ್ತ್ರ ಭಾಗ-1 ಮತ್ತು 2 ಎಂಬ ಪುಸ್ತಕಗಳನ್ನು ಮುದ್ರಿಸಿ ಸಮಾಜಕ್ಕೆ ನೀಡಿದರು. ಮುಂದೆ ಲಿಂಗಾನಂದ ಸ್ವಾಮೀಜಿ ಪ್ರವಚನದ ಮೂಲಕ ಕರ್ನಾಟಕದ ತುಂಬಪ್ರಚಾರಪಡಿಸಿ ಸಮಾಜದಲ್ಲಿ ಬಸವಣ್ಣನವರ ಎತ್ತರದ ಸ್ಥಾನವನ್ನು ತೋರಿಸಿಕೊಟ್ಟರು ಎಂದರು.

ವೀರಶೈವ ಧರ್ಮ ಅತ್ಯಂತ ಪ್ರಾಚೀನ, ಸಕಲ ಜೀವಾತ್ಮರಿಗೆ ಸದಾ ಒಳ್ಳೆಯದನ್ನೇ ಬಯಸಿದ ಧರ್ಮ. ತಾನೊಬ್ಬನೇ ಬದುಕಿ ಬಾಳಲೇ ಬೇಕೆಂಬ ಸಂಕುಚಿತ ಮನೋಭಾವನೆಗಳು ಇಲ್ಲಿಲ್ಲ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಿತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಧಾರ್ಮಿಕ ಸಂಸ್ಕಾರ, ಸದ್ವಿಚಾರಗಳನ್ನು ಕೊಟ್ಟ ಕೀರ್ತಿ ವೀರಶೈವಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.

ರಾಜ್ಯ ಕದಳಿ ಮಹಿಳಾ ವೇದಿಕೆ ಸಂಚಾಲಕರಾದ ಶರಣೆ ಸುಶೀಲಾ ಸೋಮಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ತಾಲೂಕು ಅಧ್ಯಕ್ಷ ಡಾ.ಎಂ.ಇ.ಜಯರಾಜ್, ಗೌರವಾಧ್ಯಕ್ಷ ಎಸ್.ಎಸ್. ಶಿವಮೂರ್ತಿ, ವೀರಶೈವ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್. ಜಯಣ್ಣ, ನಿವೃತ್ತ ಪ್ರಾಂಶುಪಾಲ ಎಚ್.ಎಸ್. ರಮೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ರವಿಪ್ರಕಾಶ್, ಮುಖಂಡರಾದ ಕೆ.ವಿ. ಯೋಗೇಶ್, ಪಾರ್ವತಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net