ಬಸವ ಧರ್ಮದ ಮಹಾನ್ ಚೇತನ ಫ.ಗು.ಹಳಕಟ್ಟಿ

4BK2
ಬಸವಕಲ್ಯಾಣದ ಅರಿವು ಆಚಾರ ಅನುಭಾವ ಕೇಂದ್ರದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಅವರ ಜಯಂತಿ ಮತ್ತು ಲಿಂಗಾನಂದ ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಉದ್ಘಾಟಿಸಿದರು. ಶ್ರೀ ಬಸವಪ್ರಭು ಸ್ವಾಮೀಜಿ, ಪೂಜ್ಯ ಬಸವರಾಜ ಪಂಡಿತ, ನಿವೃತ್ತ ನ್ಯಾಯಾಧೀಶ ಎಸ್.ಎಸ್. ನಾಗರಾಳೆ, ಜಯಪ್ರಕಾಶ ಸದಾನಂದೆ, ಸುಲೋಚನಾ ಮಾಮನೆ ಇತರರಿದ್ದರು.
Published on

ಬಸವಕಲ್ಯಾಣ: ಬಸವ ಧರ್ಮಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನ್ ಚೇತನರಾದ ಡಾ.ಫ.ಗು.ಹಳಕಟ್ಟಿ ಮತ್ತು ಪೂಜ್ಯ ಲಿಂಗಾನಂದ ಸ್ವಾಮೀಜಿ ಅವರನ್ನು ನಾವು ಎಂದು ಮರೆಯುವಂತಿಲ್ಲ. ಅವರನ್ನು ನಾವು ಸ್ಮರಿಸುವುದು ಕೃತಜ್ಞತೆ ಸಂಕೇತವಾಗಿದೆ ಎಂದು ಬೀದರ್‌ನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಹೇಳಿದರು.

ನಗರದ ಅರಿವು ಆಚಾರ ಅನುಭಾವ ಕೇಂದ್ರದಲ್ಲಿ ಅರಿವು ಆಚಾರ ಅನುಭಾವ ಕೇಂದ್ರ ಹಾಗೂ ಕಲ್ಯಾಣ ಮಹಾಮನೆ ಸಹಯೋಗದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಡಾ. ಫ.ಗು.ಹಳಕಟ್ಟಿ ಅವರ ಜಯಂತಿ ಮತ್ತು ಶ್ರೀ ಲಿಂಗಾನಂದ ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ, ಕನ್ನಡ ನಾಡು ನುಡಿಗಾಗಿ, ಮಹಿಳೆಯರ ಸಬಲೀಕರಣಕ್ಕಾಗಿ ದುಡಿದವರು ಫ.ಗು.ಹಳಕಟ್ಟಿಯವರು. ಅವರ ಸತತ ಪರಿಶ್ರಮದ ಸಂಶೋಧನೆ ಕಾರಣವಾಗಿ ವಚನ ಸಾಹಿತ್ಯ ದೊರಕಿದ್ದರಿಂದ ಅವರು ಸದಾ ಸ್ಮರಣೀಯರು ಎಂದರು.

ಸಾನ್ನಿದ್ಯ ವಹಿಸಿದ್ದ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಮಾತನಾಡಿ, ಗುರು ಬಸವಣ್ಣನವರು ಧರ್ಮದ ಗುಮ್ಮಟವಾದರೆ, ಫ.ಗು ಹಳಕಟ್ಟಿಯವರು ವಚನ ಗುಮ್ಮಟ, ಲಿಂಗಾನಂದ ಮಹಾ ಸ್ವಾಮಿಗಳು ಪ್ರವಚನ ಗುಮ್ಮಟವಾಗಿದ್ದಾರೆ. ಇಬ್ಬರು ಮಹನೀಯರು ತಮ್ಮ ಜೀವವನ್ನು ಶ್ರೀಗಂಧದಂತೆ ಸವೆದು ಬಸವ ಧರ್ಮಕ್ಕೆ ದಿಕ್ಷೂಚಿ ಒದಗಿಸಿದ್ದಾರೆ. ಇಂದು ಬಸವ ಧರ್ಮ ಪ್ರಚಾರ ಮಾಡಲು ನಮಗೇನು ಕಷ್ಟವಿಲ್ಲ. ನಮಗೆ ಬದ್ಧತೆ ಬೇಕಾಗಿದೆ ಎಂದರು.

ನೇತೃತ್ವ ವಹಿಸಿದ್ದ ಪೂಜ್ಯ ಬಸವರಾಜ ಪಂಡಿತ ಮಾತನಾಡಿ, ಫ ಗು ಹಳಕಟ್ಟಿ ಮತ್ತು ಲಿಂಗಾನಂದ ಸ್ವಾಮೀಜಿ ಅವರು ಬಸವ ಧರ್ಮದ ಎರಡು ನೇತ್ರಗಳು. ಬಸವ ಧರ್ಮವನ್ನು ಆಳವಾಗಿ ಅವರು ಅರಿತಿದ್ದರಿಂದ ಅಷ್ಟೆಲ್ಲ ಕಾರ್ಯ ಮಾಡಿದರು. ನಾವು ಸಹಿತ ಬಸವ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿ ತತ್ವ ಪ್ರಚಾರಕ್ಕೆ ಇಳಿಯಬೇಕು. ವಚನಗಳನ್ನು ಕೇವಲ ಕಂಠ ಪಾಠ ಮಾಡಿದರೆ ಸಾಲದು ಅವುಗಳನ್ನು ಅರ್ಥೈಸಿಕೊಂಡು ಬದುಕಲು ಪ್ರಯತ್ನಿಸಬೇಕು ಎಂದರು.

ನಿವೃತ್ತ ನ್ಯಾಯಾಧೀಶ ಎಸ್ ಎಸ್ ನಾಗರಾಳೆ ಅಧ್ಯಕ್ಷತೆ ವಹಿಸಿದ್ದರು. ಬಸವ ತತ್ವ ಪ್ರಚಾರ ಮತ್ತು ಪ್ರಸಾರ ಕೇಂದ್ರದ ಅಧ್ಯಕ್ಷ ಜಯಪ್ರಕಾಶ ಸದಾನಂದೆ, ಅಕ್ಕನ ಬಳಗದ ಅಧ್ಯಕ್ಷ ಸುಲೋಚನಾ ಮಾಮನೆ ಮಾತನಾಡಿದರು. ಆಕಾಶ ಮೋಳಕೇರಾ, ಶ್ರೀದೇವಿ ಉಜಳಂಬೆ, ಕವಿತಾ ಸಜ್ಜನಶೆಟ್ಟಿ, ಗಿರಿಜಾ ಸಿದ್ದಣ್ಣ, ಲಕ್ಷ್ಮೀಬಾಯಿ ಪಾಟೀಲ ವಚನ ಗಾಯನ ಮಾಡಿದರು.

ಶ್ರೀಶೈಲ ಹುಡೇದ, ಭೀಮಾಶಂಕರ, ಗುರುಪ್ರಸಾದ ಪಂಡಿತ, ವೀರಶೆಟ್ಟಿ ಪಾಟೀಲ, ಶಾಮರಾವ್ ಸ್ವಾಮಿ, ಚಂದ್ರಕಾಂತ ಗುಂಗೆ, ರಾಮ ಮಜಿಗೆ, ಗಣಪತಿ ಖಾಸ್ತೆ, ಪುಷ್ಪಾ ಮಾಮನೆ, ಜಯಶ್ರೀ ಪಾಟೀಲ, ಜಯಶ್ರೀ ಬಿರಾಜದಾರ, ರಾಣಿ ವಡ್ಡೆ, ಅಂಬಿಕಾ ನಾಗರಾಳೆ, ಪಂಡಿತ ನಾಗರಾಳೆ, ಕಲ್ಯಾಣರಾವ ಮದರಗಾವ ಇದ್ದರು. ಸುಮಿತ್ರಾ ದಾವಣಗಾವೆ ಸ್ವಾಗತಿಸಿದರು. ರೇಣುಕಾ ಮಾಮನೆ ವಂದಿಸಿದರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net