ಬಸವ ತತ್ವದಿಂದ ಶಾಂತಿ-ಸೌಹಾರ್ದ

11BK1
ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಶನಿವಾರ ಆಯೋಜಿಸಿದ್ದ ೨೪ನೇ ಕಲ್ಯಾಣ ಪರ್ವದ ಧರ್ಮ ಚಿಂತನ ಗೋಷ್ಠಿಯನ್ನು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಿದರು. ಪೂಜ್ಯ ಡಾ.ಮಾತೆ ಗಂಗಾದೇವಿ, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಪ್ರಭುದೇವ ಸ್ವಾಮೀಜಿ, ವಿಜಯಸಿಂಗ್, ಮಲ್ಲಿಕಾರ್ಜುನ ಗುಂಗೆ, ಬಸವರಾಜ ಬುಳ್ಳಾ, ಶಿವರಾಜ ನರಶೆಟ್ಟಿ, ರವೀಂದ್ರ ಕೊಳಕುರ ಇತರರಿದ್ದರು.
Published on

ಬಸವಕಲ್ಯಾಣ: ಬಸವ ತತ್ವ ಆಚರಣೆಗೆ ಬಂದರೆ ವಿಶ್ವದಲ್ಲೇ ಸಹೋದರತ್ವ, ಶಾಂತಿ ಮತ್ತು ಸೌಹಾರ್ದ ನೆಲೆಸುತ್ತದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಬಸವ ಧರ್ಮ ಪೀಠ ಕೂಡಲಸಂಗಮದಿಂದ ಇಲ್ಲಿನ ಬಸವ ಮಹಾಮನೆ ಪರಿಸರದಲ್ಲಿ ಆಯೋಜಿಸಿರುವ ೨೪ನೇ ಕಲ್ಯಾಣ ಪರ್ವದ ಎರಡನೇ ದಿನ ಶನಿವಾರ ಧರ್ಮ ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಬಸವ ಧರ್ಮ ಬಗ್ಗೆ ನಮಗೆ ಪ್ರೀತಿ ಅಭಿಮಾನವಿದೆ. ಮಾನ್ಯತೆ ಸಿಕ್ಕರೆ ತಾವು ಒಪ್ಪಿಕೊಳ್ಳುವ ಜತೆಗೆ ಇದನ್ನೇ ಬರೆಸುತ್ತೇವೆ ಎಂದರು.

ಧರ್ಮ ಎಂದರೇನು? ಜನರಿಗೆ ಯಾವ ಧರ್ಮ ಹಿತ? ಸದ್ಯ ಈ ವಿಷಯ ಬಗ್ಗೆ ಗೊಂದಲ ಮೂಡಿದೆ. ಎಲ್ಲ ಧರ್ಮದ ಸಾರ ಒಂದೇ, ಜನಹಿತ ಬಯಸುವುದೇ ಧರ್ಮ. ಆದರೆ ಜಾತಿ, ಧರ್ಮದ ಹೆಸರಿನಲ್ಲಿ ಗೊಂದಲ, ಸಂಘರ್ಷ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಸವ ತತ್ವ ವಿಶ್ವವೇ ಬೆರಗುಗೊಳಿಸುವಂಥ ತತ್ವ. ಬಸವಾದಿ ಶರಣರು ಸರಳವಾಗಿ ಎಲ್ಲರಿಗೂ ತಿಳಿಯುವಂತೆ ವಚನಗಳನ್ನು ಬರೆದಿದ್ದಾರೆ. ಆದರ್ಶ ಬದುಕಿಗೆ ದಾರಿ ತೋರುವ ತತ್ವ ಸಿದ್ಧಾಂತಗಳಿವೆ. ಬಸವ ಧರ್ಮ ವಿಶ್ವ ಒಪ್ಪುವಂಥ ಧರ್ಮ. ಆದರೆ ತತ್ವ ಹೇಳುವವರ ಆಚರಣೆಯಲ್ಲಿ ಗೊಂದಲ ಇರಬಾರದು ಎಂದು ಅಭಿಪ್ರಾಯಪಟ್ಟರು.

ಧರ್ಮದ ಹೆಸರಿನಲ್ಲಿ ಅಸಮಾನತೆ ಸಲ್ಲದು. ಸಮಾಜದಲ್ಲಿ ಅಸಮಾನತೆ, ಮೂಢನಂಬಿಕೆ, ಕಂದಾಚಾರ, ಶೋಷಣೆ, ಮನುಷ್ಯನನ್ನು ಮನುಷ್ಯರಂತೆ ಕಾಣದಂಥ ಕೆಟ್ಟ ವ್ಯವಸ್ಥೆ ಇತ್ತು. ಸೀಯರಿಗೆ ಅಂದು ಸಮಾನತೆ ಇರಲಿಲ್ಲ. ಬಸವಣ್ಣನವರು, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಬಂದ ನಂತರ ಸೀಯರಿಗೆ ಸಮಾನತೆ, ಸ್ವಾತಂತ್ರ, ಗೌರವ ಸಿಕ್ಕಿದೆ ಎಂದರು.

ಧರ್ಮಾಂದತೆ ಇರುವ ಕಡೆ ದೇಶಗಳು ನಾಶವಾಗಿವೆ. ಧರ್ಮಗಳಲ್ಲಿನ ಒಳ್ಳೆಯ ವಿಷಯಗಳನ್ನು ಮರೆಮಾಚಿ ಕೆಟ್ಟ ವಿಚಾರಗಳನ್ನು ಪ್ರಚಾರ ಮಾಡುವುದು ಅಪಯಕಾರಿ ಎಂದು ಎಚ್ಚರಿಸಿದರು.

ಸಾನ್ನಿಧ್ಯ ವಹಿಸಿದ್ದ ಬಸವ ಧರ್ಮಪೀಠದ ಪೀಠಾಧ್ಯಕ್ಷರಾದ ಪೂಜ್ಯ ಮಹಾಜಗದ್ಗುರು ಡಾ.ಮಾತೆ ಗಂಗಾದೇವಿ, ಭಾಲ್ಕಿ ಹಿರೇಮಠ ಸಂಸ್ಥಾನ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಗೋರ್ಟಾ ಲಿಂಗಾಯತ ಮಹಾಮಠದ ಶ್ರೀ ಪ್ರಭುದೇವ ಸ್ವಾಮೀಜಿ, ಕರ್ನಾಟಕ ನಿರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೊಮನಾಥ ಪಾಟೀಲ್ ಮಾತನಾಡಿದರು.

ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ದೇವರು, ಬೇಲೂರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಹೈದರಾಬಾದ್ ಬಸವ ಮಂಟಪದ ಶ್ರೀ ಸದ್ಗುರು ಅನಿಮಿಷಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ರಾಷ್ಟ್ರೀಯ ಬಸವದಳ ತೆಲಂಗಾಣ ಅಧ್ಯಕ್ಷ ಶಂಕ್ರೆಪ್ಪ ಪಾಟೀಲ್, ಸಾಹಿತಿ ಪ್ರೊ.ಸಿದ್ದು ಯಾಪಲಪರವಿ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಮಾಜಿ ಸದಸ್ಯ ಸುಧೀರ ಕಾಡಾದಿ, ಆರ್.ಜಿ. ಶೆಟಗಾರ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಬಸವರಾಜ ಬುಳ್ಳಾ, ಅಧ್ಯಕ್ಷ ಕಂಟೆಪ್ಪ ಗುಂದಿಗುಡಿ, ಪ್ರಧಾನ ಕಾರ್ಯದರ್ಶಿ ಶಿವರಾಜ ನರಶೆಟ್ಟಿ, ಬಸವದಳ ತಾಲೂಕು ಅಧ್ಯಕ್ಷ ರವೀಂದ್ರ ಕೊಳಕೂರ, ರಾಜೇಂದ್ರ ಜೊನ್ನಿಕೇರಿ, ನಾಗಯ್ಯ ಸ್ವಾಮಿ ಮುಧೋಳ, ಮಹಾದೇವ ಬೇಲೂರೆ, ಶಿವಶಂಕರ ಟೋಕರೆ ಇತರರಿದ್ದರು. ಸಂಜುಕುಮಾರ ಪಾಟೀಲ್ ಸ್ವಾಗತಿಸಿದರು. ಪ್ರವೀಣ ಎಕಲಾರೆ ಹಾಗೂ ಸುರೇಶಕುಮಾರ ನಿರೂಪಣೆ ಮಾಡಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಲ್ಲಿಕಾರ್ಜುನ ಗುಂಗೆ (ಶರಣ ಸಮಾಜ ಸೇವಾರತ್ನ ಪ್ರಶಸ್ತಿ), ಚಂದ್ರಶೇಖರ ಸೋಮಶೆಟ್ಟಿ (ಶರಣ ಕಲಾರತ್ನ), ಸುಶೀಲಾಬಾಯಿ ಕೆ.ಧನ್ನೂರ (ಶರಣ ದಾಸೋಹರತ್ನ), ಪುಂಡಲೀಕರಾವ ಪಾಟೀಲ್ ಗೌಡಗಾಂವ (ಶರಣ ಸೇವಾರತ್ನ), ಗುರುಲಿಂಗಪ್ಪ ಮೇಲ್ದೊಡ್ಡಿ (ಶರಣ ಕೃಷಿರತ್ನ), ಯಶವಂತರಾವ ಪಾಟೀಲ್ (ಶರಣ ಕಾಯಕರತ್ನ), ಹಾವಗಿ ವಟಗೆ (ಶರಣ ಕೃಷಿರತ್ನ) ಪ್ರಶಸ್ತಿ ಸ್ವೀಕರಿಸಿದರು.

ಶೂನ್ಯ ಪೀಠಾರೋಹಣ: ಪ್ರಥಮ ಶೂನ್ಯ ಪೀಠಾರೋಹಣದ ೮೪೦ನೇ ಸಂಸ್ಮರಣೆ ಮತ್ತು ದ್ವಿತೀಯ ಶೂನ್ಯ ಪೀಠಾರೋಹಣದ ೨೩ನೇ ವಾರ್ಷಿಕೋತ್ಸವ ನಿಮಿತ್ತ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಪೀಠಾರೋಹಣ ಮಾಡಿ ಆಶೀರ್ವಚನ ನೀಡಿದರು. ಇದಕ್ಕೂ ಮುನ್ನ ನಡೆದ ಶರಣ ವಂದನೆ ಶರಣರಿಗೆ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ೭೭೦ ಅಮರ ಗಣಂಗಳನ್ನು ಸ್ತುತಿಸುವ ಧಾರ್ಮಿಕ ವಿಧಿಯನ್ನು ಶರಣ ವಂದನೆ ಎಂದು ಪುಷ್ಪಾರ್ಚನೆಯೊಂದಿಗೆ ನಡೆಸಲಾಯಿತು.

ನಾಲಿಗೆ ಮೇಲಿರಲಿ ಹಿಡಿತ: ಬಸವ ಸಂಸ್ಕೃತಿ ಅಭಿಯಾನ ಕುರಿತು ಕನ್ಹೇರಿ ಶ್ರೀ ನೀಡಿದ ಹೇಳಿಕೆ ಖಂಡನಾರ್ಹ. ಅವರು ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಲಿ ಎಂದು ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಎಚ್ಚರಿಸಿದ್ದಾರೆ. ಬಸವ ತತ್ವ ಪ್ರಚಾರ ಪ್ರಸಾರ ಮೂಲಕ ಬಸವ ಧರ್ಮವನ್ನು ಉಳಿಸಿ ಬೆಳೆಸುವಲ್ಲಿ ಪೂಜ್ಯ ಲಿಂಗಾನAದ ಅಪ್ಪಾಜಿ ಹಾಗೂ ಪೂಜ್ಯ ಮಾತೆ ಮಹಾದೇವಿ ಕೊಡುಗೆ ದೊಡ್ಡದು. ನಾವು ಸನಾತನ ಧರ್ಮ, ಹಿಂದು ಧರ್ಮ ವಿರೋಧಿಗಳಲ್ಲ. ಆದರೆ ಲಿಂಗಾಯತ ಧರ್ಮ, ವಚನ ಸಾಹಿತ್ಯದ ಬಗ್ಗೆ ಅವಹೇಳನ ಸಹಿಸಲಾಗದು. ವಚನಗಳನ್ನು ಓದಿ ಪಚನ ಮಾಡಿಕೊಂಡರೆ ಬುದ್ಧಿ ಬರುತ್ತದೆ ಎಂದರು.

ಗುರು ಬಸವಣ್ಣನವರು ಎಲ್ಲ ಕ್ಷೇತ್ರ, ಎಲ್ಲರಿಗೂ ನ್ಯಾಯ ಕೊಟ್ಟಿದ್ದಾರೆ. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಹೇಳಿದ್ದಾರೆ. ಬಸವ ತತ್ವ ಪ್ರಚಾರ-ಪ್ರಸಾರ ಕಾರ್ಯ ಕಲ್ಯಾಣ ಪರ್ವದಲ್ಲಿ ನಡೆಯುತ್ತಿದ್ದು, ಇದು ಬಸವ ತತ್ವದ ಹಬ್ಬ. ಎಲ್ಲರೂ ಸಂತೋಷದಿಂದ ಭಾಗವಹಿಸಬೇಕು. ಬಸವ ಸಂಸ್ಕೃತಿ ಅಭಿಯಾನ ಕುರಿತು ಕನ್ಹೇರಿ ಶ್ರೀ ಹೇಳಿಕೆ ಖಂಡನಾರ್ಹ.

| ಶ್ರೀ ಗುರುಬಸವ ಪಟ್ಟದ್ದೇವರು

ಭಾಲ್ಕಿ ಹಿರೇಮಠ ಸಂಸ್ಥಾನ ಪೀಠಾಧಿಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net