

ಬೀದರ್: ಬಸವಾದಿ ಶರಣರ ತತ್ವ, ಸಂದೇಶವನ್ನು ದೇಶಾದ್ಯಂತ ಪ್ರಚಾರ ಪ್ರಸಾರ ಮಾಡುವಲ್ಲಿ ಶ್ರೀ ಲಿಂಗಾನಂದ ಸ್ವಾಮೀಜಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಬೆಂಗಳೂರಿನ ಬಸವಗಂಗೋತ್ರಿಯ ಶ್ರೀ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಮತ್ತು ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸಹಯೋಗದಡಿ ನಗರದ ಬಸವ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಲಿಂಗಾನಂದ ಸ್ವಾಮೀಜಿ ಹಾಗೂ ಫ.ಗು. ಹಳಕಟ್ಟಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ೧೯೮೦ರ ದಶಕದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರತಿ ಹಳ್ಳಿ, ಪಟ್ಟಣ, ನಗರಕ್ಕೆ ಭೇಟಿ ನೀಡಿ ಬಸವ ತತ್ವವನ್ನು ಮನೆ ಮನಗಳಿಗೆ ಮುಟ್ಟಿಸುವ ಕೆಲಸ ಪೂಜ್ಯರು ಮಾಡಿದ್ದರು ಎಂದರು.
ನೇತೃತ್ವ ವಹಿಸಿದ್ದ ಬಸವ ಮಂಟಪದ ಪೂಜ್ಯ ಮಾತೆ ಸತ್ಯಾದೇವಿ ಮಾತನಾಡಿ, ಲಿಂಗಾನಂದ ಶ್ರೀಗಳು ಕಂಚಿನ ಕಂಠದ ಪ್ರವಚನಕಾರರಾಗಿದ್ದರು. ಲಕ್ಷಾಂತರ ಜನ ಶರಣರನ್ನು ಸಂಸ್ಕಾರ ನೀಡಿದ ಅವರು, ಶರಣರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಸ್ಮರಿಸಿದರು.
ಬಸವರಾಜ ಸಂಗಮದ ಮಾತನಾಡಿದರು. ಪ್ರಮುಖರಾದ ಶಿವರಾಜ ಪಾಟೀಲ್ ಅತಿವಾಳ, ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ಕಾಶೀನಾಥ ಪಾಟೀಲ್, ರವಿಕಾಂತ ಬಿರಾದಾರ್, ಬಸವಂತರಾವ ಬಿರಾದಾರ್, ಮಲ್ಲಿಕಾರ್ಜುನ ಶಾಪುರ, ಮಲ್ಲಿಕಾರ್ಜುನ ಬುಕ್ಕಾ, ಗುರುನಾಥ ನಿಡಗುಂದಿ, ಗಣಪತಿ ಬಿರಾದಾರ್, ಸತೀಶ್ ಪಾಟೀಲ್, ಸಿದ್ದವೀರ ಸಂಗಮದ, ಬಸವಕುಮಾರ ಚಟ್ನಳ್ಳಿ ಇತರರಿದ್ದರು.