

ಬೆಳಗಾವಿ: ವಿಶ್ವಗುರು ಬಸವಣ್ಣ ವಿಶ್ವಮಾನವ ಸಂದೇಶ ನೀಡಿದವರು. ಅವರ ವಿಚಾರಗಳು ಕಾಲಾತೀತವಾದವು. ಆದರೆ, ನಾವು ಬಸವಣ್ಣನವರನ್ನು ಇಂದಿಗೂ ಅರ್ಥೈಸಿಕೊಂಡಿಲ್ಲ. ಒಳಪಂಗಡಗಳ ಮರೆತು ಒಂದಾಗಿ ಬಸವ ಜಯಂತಿ ಒಂದೇ ವೇದಿಕೆಯ ಮೇಲೆ ಆಚರಿಸೋಣ ಎಂದು ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಕರೆ ನೀಡಿದರು.
ಇಲ್ಲಿನ ಶಿವಬಸವನಗರದ ಲಿಂಗಾಯತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನ ಜಯಂತಿ ಉತ್ಸವವನ್ನು ಎಲ್ಲ ವೀರಶೈವ ಹಾಗೂ ಲಿಂಗಾಯತ ಸಂಘಟನೆಗಳ ಆಶ್ರಯದಲ್ಲಿ ಆಚರಿಸಲು ಒಮ್ಮತದ ನಿರ್ಧಾರ ಕೈಗೊಂಡ ಸಭೆಯಲ್ಲಿ ಅವರು ಮಾತನಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಸಾಮಾಜಿಕ ಸಂಘಟನೆ ಮುಖ್ಯ. ಅದರ ಕೊರತೆಯಿಂದ ಬಹತ್ ಸಮಾಜ ವಿಘಟನೆಯಾಗುತ್ತಿರುವುದು ಆಘಾತಕಾರಿ. ಒಳಭೇದಗಳನ್ನು ತೊರೆದು ಸಮಾನ ಮನಸ್ಕರಾಗಿ ಬಸವಣ್ಣನವರ ವಿಚಾರದಂತೆ ಇವ ನಮ್ಮವ ಎಂಬ ಭಾವದಿಂದ ಸಮಾಜ ಕಟ್ಟಬೇಕಾಗಿದೆ. ಬಸವಣ್ಣನ ಕಂಚಿಮೂರ್ತಿ ಸೊಲ್ಲಾಪುರದಲ್ಲಿ ಸಿದ್ದಪಡಿಸಿದ್ದು, ಶೀಘ್ರವಾಗಿ ಬಸವ ವತ್ತದಲ್ಲಿ ಪ್ರತಿಷ್ಠಾಪನೆಗೊಳಿಸಲಿದೆ ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ಸಮಾಜದ ಸಾಂಕ ಶಕ್ತಿ ಉಳಿಸಿಕೊಳ್ಳಬೇಕಾದರೆ ಬಸವ ಜಯಂತಿಯನ್ನು ಒಂದೇ ವೇದಿಕೆಯ ಮೇಲೆ ಆಚರಿಸೋಣ ಎಂದರು.
ಶಂಕರ ಗುಡಸ, ಅಶೋಕ ಮಳಗಲಿ, ಅಶೋಕ ಬೆಂಡಿಗೇರಿ, ಚಂದ್ರಶೇಖರ ಬೆಂಬಳಗಿ, ರಮೇಶ ಕಳಸಣ್ಣನವರ, ಸೋಮಲಿಂಗ ಮಾವಿನಕಟ್ಟಿ, ಬಾಲಚಂದ್ರ ಬಾಗಿ, ಶಂಕರ ಪಟ್ಟೇದ, ಸರೋಜನಿ ನಿಶಾನದಾರ, ಅರುಣಾ ಖಡಬಡಿ, ಕಿರಣ ಅಗಡಿ, ಪಂಚಾಕ್ಷರಿ ಚೊಣ್ಣದ, ಮುರುಗೇಶ ಪಾಟೀಲ, ಅಂಜನಾ ಕಿತ್ತೂರ, ಆನಂದ ಗುಡಸ, ಸೂರ್ಯಕಾಂತ ಬಾವಿ, ಡಾ.ಮಹೇಶ ಗುರನಗೌಡರ ಇತರರಿದ್ದರು.