

ಮೈಸೂರು: ಹನ್ನೆರಡನೇ ಶತಮಾನದಲ್ಲಿ ಶುರುವಾದ ಬಸವ ಕ್ರಾಂತಿ ಈಗಲೂ ಮುಂದುವರಿದಿದೆ. ಅದಕ್ಕೆ ಕೊನೆ ಇಲ್ಲ ಎಂದು ಚಿಂತಕ ಶಂಕರ ದೇವನೂರು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನಾ ವಿಸ್ತರಣಾ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಉಪನ್ಯಾಸ, ‘ವಚನ ಜಿಜ್ಞಾಸೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಕ್ರಾಂತಿಗೂ ಕೊನೆ ಇರಲ್ಲ. ಹಾಗೆ ಬಸವ ಕ್ರಾಂತಿ ಸಹ ಸ್ತಬ್ಧವಾಗಿಲ್ಲ. ಅದು ನಿರಂತರವಾಗಿ ಸಾಗಿ ಚಲನಶೀಲಗೊಂಡಿದೆ. ಇನ್ನಷ್ಟು ಕ್ರಿಯಾಶೀಲವೂ ಆಗಿದೆ. ಶರಣರ ಚಿಂತನೆ ಮೌಲಿಕ. ಅದು ಮಹತ್ವದ ಕಾಲ ಘಟ್ಟ. ಈ ಚಿಂತನೆ ಪುಳಕಗೊಳಿಸಿ ಮನಸ್ಸನ್ನು ಚಲನಶೀಲನಗೊಳಿಸಿ ಕ್ರಿಯಾಶೀಲಗೊಳಿಸುತ್ತದೆ. ಆದರೆ, ಈಗಿನ ತಂತ್ರಜ್ಞಾನ, ವಿಜ್ಞಾನದ ಆಧುನಿಕ ಯುಗದಲ್ಲಿ ಮನಸ್ಸು ಜಡತ್ವಗೊಂಡಿದೆ ಎಂದರು.
ವಚನಗಳು ನಿರಂತರವಾಗಿ ಬದಲಾವಣೆ ಕಂಡಿವೆ. ಅದು ಹೇಗೆ ಎಂದು ಹೇಳಲಾಗಲ್ಲ. ಕಾಲ, ವರ್ತಮಾನದೊಂದಿಗೆ ಮಿಳಿತಗೊಂಡಿದೆ. ಬುದ್ಧ, ಬಸವಣ್ಣ ಕಾಲದ ಜ್ಞಾನ, ತಿಳಿವಳಿಕೆಗೆ ತಾತ್ವಿಕ ನೆಲೆಗಟ್ಟಿದೆ. ಹೀಗಾಗಿ, ವಿಜ್ಞಾನಿಗಳು ಇದನ್ನು ಪುರಸ್ಕರಿಸಿದ್ದಾರೆಯೇ ಹೊರತು, ತಿರಸ್ಕರಿಸಿಲ್ಲ. ಬಸವ ತತ್ವವನ್ನು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಯನ ಮಾಡಲಾಗುತ್ತದೆ. ಇದು ಸಾಧ್ಯವಾಗಿದ್ದು ಅದರಲ್ಲಿರುವ ವೈಜ್ಞಾನಿಕ ಚಿಂತನೆ ಕಾರಣದಿಂದ ಎಂದರು.
ವಚನ ಚಳವಳಿಯ ಜ್ಞಾನ ಕಾಯಕದಿಂದ ಬಂದಿದೆ. ಅದು ಪಾಂಡಿತ್ಯದಿಂದ ಬಂದಿಲ್ಲ. ಕಾಯಕದ ಮೂಲಕ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಬಸವಣ್ಣ ಪ್ರೇರಣೆಯಾದರು. ಧ್ವನಿ ಇಲ್ಲದವರಿಗೂ ಧ್ವನಿ ಕಲ್ಪಿಸಿಕೊಟ್ಟರು. ಸಮಸಮಾಜ ಕಲ್ಪನೆ ಕೊಟ್ಟವರು. ಅವರು ತಮ್ಮ ಹುಟ್ಟಿನ ಧರ್ಮವನ್ನು ಪ್ರಶ್ನಿಸಿದರೂ, ತಿರಸ್ಕರಿಸಿದರು ಸಹ. ಜತೆಗೆ, ಅದಕ್ಕೆ ಪರ್ಯಾಯ ಸೂಚಿಸಿದರು. ಇದೀಗ ಯಾವುದಕ್ಕೂ ಪರ್ಯಾಯ ಇಲ್ಲ. ಅದಕ್ಕೆ ಸೋಲಾಗುತ್ತಿದೆ ಎಂದರು.
ಬಸವಣ್ಣನವರು ದಲಿತರ, ತಳ ಸಮುದಾಯದವರನ್ನು ಅಪ್ಪಿಕೊಂಡರು. ಈ ಸಮುದಾಯದವರು ಆತ್ಮಗೌರವದೊಂದಿಗೆ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಆದರೀಗ ದಲಿತರನ್ನು ದೂರ ಇಟ್ಟು ಬದುಕಲಾಗುತ್ತಿದೆ. ಜಾತಿ, ಧರ್ಮ, ಕುಲಕ್ಕಾಗಿ ಬದುಕಲಾಗುತ್ತಿದೆ. ಸೇವೆ ಮತ್ತು ಬೇರೆಯವರಿಗೆ ಬದುಕುವುದರಲ್ಲೇ ಸಾರ್ಥಕತೆ ಇದೆ ಎಂಬುದು ಮರೆಯಾಗಿದೆ. ಬದುಕು ಪ್ರದರ್ಶನವಾಗುತ್ತಿದೆಯೇ ಹೊರತು, ನಿದರ್ಶನವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತಿ, ಸಂದರ್ಶಕ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ಸದಾ ಕಾಲಕ್ಕೂ ಪ್ರಸ್ತುತವಾಗಿರುವ ಬಸವ ಚಿಂತನೆಯನ್ನು ಈಗಿನ ಸಮಾಜದಲ್ಲಿ ಪಾಲನೆಯಾಗುತ್ತಿದೆಯೇ? ಏನು ಸಾಧನೆ ಮಾಡಬೇಕಿತ್ತು. ಅದು ಮಾಡಲೂ ಈಗಲೂ ಸಾಧ್ಯವಾಗಿಲ್ಲ. ಈ ವಿಷಯದಲ್ಲಿ ಸಮಾಜವೇ ಅಪ್ರಸ್ತುತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಸವ ಚಿಂತನೆ, ಚಳವಳಿ ನಿತ್ಯಹರಿದ್ವರ್ಣ. ಅದು ಎಂದೂ ಮರೆಯಲಾಗದ ಆಲೋಚನೆ ಕ್ರಮ. 21ನೇ ಶತಮಾನದಲ್ಲಿ ಚಿಂತನೆಯನ್ನು 12ನೇ ಶತಮಾನದಲ್ಲೇ ಬಿತ್ತನೆ ಮಾಡಲಾಗಿದ್ದು, ಅದು ‘ಸಂವಿಧಾನ’ ಎಂಬ ಭೋದಿ ವೃಕ್ಷದಡಿ ನಾವು ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ ಎಂದರು.
ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಡಾ.ಎಸ್.ಡಿ.ಶಶಿಕಲಾ ಇನ್ನಿತರರಿದ್ದರು.
ರಾಜ್ಯ ಮಟ್ಟದ ವಚನ ವಿಮರ್ಶೆ ಸ್ಪರ್ಧೆಯಲ್ಲಿ 33 ಅಭ್ಯರ್ಥಿಗಳು ಭಾಗಿಯಾಗಿದ್ದರು.
ನಗರದ ಸಿನಿಮಾ ನಿರ್ದೇಶಕರಾದ ಅಪೂರ್ವ ಡಿ. ಸಿಲ್ವಾ ಪ್ರಥಮ, ಸಹಾಯಕ ಪ್ರಾಧ್ಯಾಪಕರಾದಎಂ.ಎಸ್.ಸಂಧ್ಯಾರಾಣಿ ದ್ವಿತೀಯ, ಹಾಸನದ ಶಿಕ್ಷಕಿ ಸಿ.ಎಚ್.ಮಂಜುಳಾ, ಮೈವಿವಿ ಎಂ.ಎ(ಕನ್ನಡ) ವಿದ್ಯಾರ್ಥಿ ಎಂ.ಎ.ತೇಜಸ್ ತೃತೀಯ ಬಹುಮಾನ ಪಡೆದಿದ್ದಾರೆ.
ಇವರಿಗೆ ಕ್ರಮವಾಗಿ 5 ಸಾವಿರ ರೂ., 3 ಸಾವಿರ ರೂ. 2 ಸಾವಿರ ರೂ. ನೀಡಲಾಯಿತು. ಹಂಪಿಯ ಪ್ರವೀಣ ನಿಂಗಪ್ಪ ಕಿತ್ತೂರು, ಯುವರಾಜ ಕಾಲೇಜಿನ ಎಂ.ಚೈತ್ರಾ, ಬೆಂಗಳೂರಿನ ಗೃಹಿಣಿ ಬಿಂದುರಾಜ ಸಮಾಧಾನಕರ ಬಹುಮಾನದೊಂದಿಗೆ 1 ಸಾವಿರ ರೂ. ಪಡೆದುಕೊಂಡರು.