

ಬೀದರ್: ಬಸವಕಲ್ಯಾಣದಲ್ಲಿ ಮಾ. 11 ಮತ್ತು 12 ರಂದು ನಡೆಯಲಿರುವ ಬಸವ ಉತ್ಸವದಲ್ಲಿ ನಾಡಿನ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮನವಿ ಮಾಡಿದ್ದಾರೆ.
ಬಸವ ಉತ್ಸವ ಬಸವಾದಿ ಶರಣರ ವೈಚಾರಿಕ ಕ್ರಾಂತಿ ಸ್ಮರಿಸಿ, ಅದನ್ನು ಮುಂದುವರಿಸಿಕೊಂಡು ಹೋಗುವ ಉತ್ಸವವಾಗಿದೆ. ಕಾಯಕ, ದಾಸೋಹ, ಮಾನವೀಯತೆ, ಜಾತಿ, ವರ್ಗ, ವರ್ಣ ರಹಿತ, ಧರ್ಮ ಸಹಿತ ಸಮಾಜ ನಿರ್ಮಾಣದ ಉತ್ಸವವಾಗಿದೆ ಎಂದು ಹೇಳಿದ್ದಾರೆ.
ನಾಲ್ಕು ವರ್ಷಗಳ ನಂತರ ಬಸವ ಉತ್ಸವಕ್ಕೆ ಮತ್ತೆ ಚಾಲನೆ ದೊರೆತಿರುವುದು ಸಂತಸ ಉಂಟು ಮಾಡಿದೆ. ಉತ್ಸವ ಆಚರಣೆಗೆ ಹಸಿರು ನಿಶಾನೆ ತೋರಿರುವ ರಾಜ್ಯ ಸರ್ಕಾರ ಹಾಗೂ ಉತ್ಸವ ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ತಯಾರಿ ನಡೆಸಿರುವ ಜಿಲ್ಲಾ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಬಸವ ಉತ್ಸವ ಬೇರೆ ಉತ್ಸವಗಳಿಗಿಂತ ವಿಶಿಷ್ಟ ಹಾಗೂ ಮಹತ್ವಪೂರ್ಣವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಬಸವ ಉತ್ಸವಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು. ಪ್ರತಿ ವರ್ಷ ಕಡ್ಡಾಯವಾಗಿ ಆಚರಿಸಬೇಕು ಎಂದು ಒತ್ತಾಯಿಸಿದ್ದಾರೆ.