ಬಿಸಿಲಿನದ್ದೇ ಆಟ... ಅಕ್ಕಿಆಲೂರು ಸುತ್ತುಮುತ್ತ ಒಣಗುತ್ತಿದೆ ತೋಟ

adake tota
Published on

ಕಿರಣ ಹೂಗಾರ ಅಕ್ಕಿಆಲೂರ

ಜೂನ್ ತಿಂಗಳು ಮುಗಿಯುತ್ತಿರುವ ಈ ಹೊತ್ತಿನಲ್ಲಿ ಆಕಾಶ ತುಂಬ ಕಪ್ಪು ಮೋಡ ಇರಬೇಕಿತ್ತು. ಆಗಾಗ ಮಳೆ ಸುರಿಯುತ್ತಿರಬೇಕಿತ್ತು. ಆದರೆ, ಈ ಸಲ ಆಕಾಶ ಶುಭ್ರವಾಗಿದ್ದು, ಬಿಸಿಲಿನ ದರಬಾರು ಮುಂದುವರಿದಿದೆ. ಮುಂಗಾರು ಮಳೆ ಸಮರ್ಪಕವಾಗಿ ಆಗದ ಕಾರಣ ನೀರಿನ ಕೊರತೆ ತೀವ್ರವಾಗಿದೆ. ಅರೆಮಲೆನಾಡು ಪ್ರದೇಶವಾದ ಅಕ್ಕಿಆಲೂರು ಸುತ್ತುಮುತ್ತ ಅಡಕೆ ತೋಟಗಳು ಒಣಗತೊಡಗಿವೆ.

ಕಳೆದ ನಾಲ್ಕು ವರ್ಷದಿಂದ ಉತ್ತಮ ಮಳೆಯಾದ ಪರಿಣಾಮ ಈ ಭಾಗದಲ್ಲಿ ಅಡಕೆ ಬೆಳೆ ಸಮೃದ್ಧವಾಗಿ ಬೆಳೆದಿದೆ. ಆದರೆ, ಈ ಬಾರಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೆ ಇರುವುದು ಅಡಕೆ ಬೆಳೆಗಾರರ ಚಿಂತೆಗೆ ಕಾರಣವಾಗಿದೆ. ಅಡಕೆ ಬೆಳೆಗೆ ಸರ್ಕಾರದ ಸೌಲಭ್ಯ ಮತ್ತು ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಹಲವು ರೈತರು ಅಡಕೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಈ ಬಾರಿ ಜೂನ್ ಮುಗಿಯುತ್ತ ಬಂದರೂ ಮಳೆಯ ದರ್ಶನವಾಗದೇ ಇರುವುದು ಹಾಗೂ ಕೆರೆ, ಕಟ್ಟೆ, ಬೋರ್​ವೆಲ್​ಗಳಲ್ಲಿ ನೀರಿನ ಮಟ್ಟ ಕಡಿಮೆ ಆಗಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನೀರಿಲ್ಲದೆ ಅಡಕೆ ತೋಟ ಸಂಪೂರ್ಣವಾಗಿ ಒಣಗಲಿದೆ.

ಹಾನಗಲ್ಲ ತಾಲೂಕಿನಲ್ಲಿ ಒಟ್ಟು 7900 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಇದರಲ್ಲಿ ಅಕ್ಕಿಆಲೂರ ಹೋಬಳಿ ಭಾಗದ ಪಾಲು 3178 ಹೆಕ್ಟೇರ್ ಇದೆ. ಅಡಕೆಗೆ ಉತ್ತಮ ಬೆಳೆ ಮತ್ತು ಬೆಳೆಗೆ ಅಗತ್ಯ ನೀರಿನ ಸೌಲಭ್ಯವೂ ದೊರಕುತ್ತಿರುವುದರಿಂದ ಗೋವಿನಜೊಳ, ಭತ್ತ, ಕಬ್ಬು, ಹತ್ತಿ ಬೆಳೆಗಳನ್ನು ಬಿಟ್ಟು ಇತ್ತೀಚಿನ ಎರಡು ವರ್ಷಗಳಲ್ಲಿ ರೈತರು ಅಡಕೆ ಬೆಳೆ ಬೆಳೆಯಲು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಅಡಕೆ ಮಧ್ಯೆ ಬಾಳೆ ಬೆಳೆದು ನಿರ್ವಹಣೆ ವೆಚ್ಚವನ್ನು ಹೊಂದಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಈಗ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಇಲ್ಲದೆ ಅಡಕೆ, ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳೆಲ್ಲ ಹಾಳಾಗುವ ಅಪಾಯ ಗೋಚರಿಸುತ್ತಿದೆ.

ಕೆರೆಗಳೂ ಖಾಲಿ:

ಅಕ್ಕಿಆಲೂರಿನ ಈಶ್ವರ ಕೆರೆ, ನರೇಗಲ್ಲನ ಕೆರೆ, ಜಿಗಳಿಕೆರೆ, ಹಾವಣಗಿ, ಬಾಳಂಬೀಡ, ಆಡೂರ, ತಿಳವಳ್ಳಿ ಭಾಗದ ಕೆರೆಗಳಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಹೀಗಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೊಳವೆ ಬಾವಿಗಳು ಮೊದಲಿನಂತೆ ನೀರುಗುಳುತ್ತಿಲ್ಲ. ಕೆರೆಗಳನ್ನು ತುಂಬಿಸುವ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದ ಧರ್ವ ಜಲಾಶಯದಿಂದ ನೀರು ಬರುವುದನ್ನು ರೈತರು ಕಾಯುತ್ತಿದ್ದಾರೆ. ಅತ್ತ ಧರ್ವ ಜಲಾಶಯಕ್ಕೂ ಸಾಕಷ್ಟು ನೀರು ಹರಿದುಬರಲು ಆರಂಭವಾಗಿಲ್ಲ ಎಂಬ ಮಾಹಿತಿ ಕೃಷದಿಕರನ್ನು ಮತ್ತಿಷ್ಟು ಆತಂಕಕ್ಕೆ ದೂಡುತ್ತಿದೆ.

ಮಳೆ ಇಲ್ಲದೆ ಅಡಕೆ ಬೆಳೆ ಕೈಕೊಡುತ್ತದೆ ಎಂಬ ಚಿಂತೆ ಕಾಡುತ್ತಿದೆ. ಕೆರೆಗಳಲ್ಲಿ ನೀರು ಕಡಿಮೆಯಾಗುತ್ತಿವೆ. ಬೋರ್​ಗಳು ಬತ್ತುತ್ತಿವೆ. ಎಷ್ಟೋ ರೈತರು ಹೊಸದಾಗಿ ಅಡಕೆ ಬೆಳೆಗೆ ಮುಂದಾಗಿದ್ದಾರೆ. ಮಳೆ ಬರಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಧರ್ವ ಜಲಾಶಯದಿಂದ ನೀರು ಹರಿದುಬಂದು ಹಾನಗಲ್ಲ ತಾಲೂಕಿನ ಕೆರೆಗಳು ತುಂಬುವುದನ್ನು ಕಾಯುತ್ತಿದ್ದೇವೆ. | ಸಿದ್ದಲಿಂಗೇಶ ಸಿಂಧೂರ, ಅಡಕೆ ಬೆಳೆಗಾರ ಅಕ್ಕಿಆಲೂರ ಒಂದು ಅಡಕೆ ಮರಕ್ಕೆ ದಿನಕ್ಕೆ ಸುಮಾರು 60 ಲೀಟರ್ ನೀರು ಬೇಕು. ನೀರಿನ ಮೂಲ ಅರಿತು ರೈತರು ಅಡಕೆ ಬೆಳೆ ಬೆಳೆಯಬೇಕು. ಸಾವಯವ ವ್ಯವಸಾಯದತ್ತ ಬೆಳೆಗಾರರು ಚಿತ್ತ ಹರಿಸಬೇಕು. | ಮಂಜುನಾಥ ಬಣಕಾರ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ಹಾನಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net