

ಹಾವೇರಿ: ಸ್ಥಳೀಯ ಜಿಪಂನ ಕೊನೆಯ 14 ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಶಿಗ್ಗಾಂವಿ ತಾಲೂಕು ದುಂಡಸಿ ಜಿಪಂ ಕ್ಷೇತ್ರದ ಸದಸ್ಯ ಬಸನಗೌಡ ಹನುಮಂತಗೌಡ ದೇಸಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಪಂ ಸಭಾಭವನದಲ್ಲಿ ಶನಿವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಘೊಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ದೇಸಾಯಿ, ಜಿಲ್ಲೆಯಲ್ಲಿ ನೆರೆಯಿಂದ ಶಾಲಾ ಕೊಠಡಿಗಳು ದುರಸ್ತಿಯಲ್ಲಿವೆ. ಅವುಗಳ ನಿರ್ವಣಕ್ಕೆ, ಕುಡಿಯುವ ನೀರಿನ ಸಮಸ್ಯೆ ಬರದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೆಳೆ ಹಾನಿ ಪರಿಹಾರ, ಬೆಳೆ ವಿಮೆಯಿಂದ ಸಾಕಷ್ಟು ರೈತರು ವಂಚಿತರಾಗಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಶ್ರಮಿಸುತ್ತೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸು ಹೊಂದಿದ್ದು, ಅದರಂತೆ ಇಬ್ಬರು ಸಚಿವರ ಸಹಕಾರ ಪಡೆದು ಜಿಪಂಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೊಳಿಸುತ್ತೇನೆ. ಪಕ್ಷಾತೀತವಾಗಿ ಎಲ್ಲ ಸದಸ್ಯರು ಬೆಂಬಲ ಸೂಚಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.
ಅಧ್ಯಕ್ಷ ದೇಸಾಯಿ ಅವರನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಸಿಇಒ ರಮೇಶ ದೇಸಾಯಿ, ಎಸ್ಪಿ ಕೆ.ಜಿ. ದೇವರಾಜ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಹಾಗೂ ಸದಸ್ಯರು ಅಭಿನಂದಿಸಿದರು.
ಕೈ ಪಾಳಯದ ಹೈಡ್ರಾಮಾ ಅಂತ್ಯ: ಜಿಪಂ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ಗೆ ಸೆಡ್ಡು ಹೊಡೆದಿದ್ದ ಸದಸ್ಯರನ್ನು ಒಗ್ಗೂಡಿಸಲು ಹೈಕಮಾಂಡ್ ಮೂರು ದಿನಗಳಿಂದ ಸರ್ಕಸ್ ನಡೆಸಿತ್ತು. ಕೆಲ ಸದಸ್ಯರು ಪ್ರವಾಸಕ್ಕೆ ಹೋಗಿದ್ದರು. ಇದರಿಂದ ಅಧ್ಯಕ್ಷರಾಯ್ಕೆಗಾಗಿ ಕಾಂಗ್ರೆಸ್ ಪಾಳಯದಲ್ಲಿ ಹೈಡ್ರಾಮಾವೇ ನಡೆದಿತ್ತು. ಶುಕ್ರವಾರ ರಾತ್ರಿ ಮುಖಂಡರೆಲ್ಲ ರ್ಚಚಿಸಿ ಬಸನಗೌಡ ದೇಸಾಯಿ ಅವರಿಗೆ 14 ತಿಂಗಳ ಅವಧಿಯಲ್ಲಿ ಮೊದಲ 7 ತಿಂಗಳ ಅವಧಿಗೆ ಪಟ್ಟ ಕಟ್ಟಲು ತೀರ್ಮಾನ ಕೈಗೊಂಡರು. ಇದರಿಂದ ಕೈ ಪಾಳಯದಲ್ಲಿ ಮೂಡಿದ್ದ ಎಲ್ಲ ಆತಂಕಗಳು ನಿವಾರಣೆಯಾಗಿ ಅವಿರೋಧ ಆಯ್ಕೆ ನಡೆಯಿತು. ಇವರು ರಾಜೀನಾಮೆ ಕೊಟ್ಟ ನಂತರ ಮಾಜಿ ಸಚಿವ ಮನೋಹರ ತಹಸೀಲ್ದಾರ್ ಪುತ್ರ ರಾಘವೇಂದ್ರ ತಹಸೀಲ್ದಾರ್ರನ್ನು ಅಧ್ಯಕ್ಷರನ್ನಾಗಿಸಲು ವರಿಷ್ಠರು ಆಂತರಿಕ ಒಪ್ಪಂದ ಮಾಡಿಕೊಂಡಿದ್ದಾರೆ.