ಕೆರೆ ಏರಿಯಿಂದ ಜಾರಿದ ಸಾರಿಗೆ ಬಸ್

BUS
ಹರಪನಹಳ್ಳಿ ತಾಲೂಕಿನ ಅಲಮರಸಿಕೇರಿ ಗ್ರಾಮದ ಕೆರೆ ಏರಿಯಿಂದ ಕೆಳಗೆ ಜಾರುತಲಿದ್ದ ಸಾರಿಗೆ ಬಸ್ಸನ್ನು ಚಾಲಕ ಮೌನೇಶ ಸಮಯಪ್ರಜ್ಞೆಯಿಂದ ನಿಲ್ಲಿಸಿ ಅನಾಹುತ ತಪ್ಪಿಸಿದ್ದಾರೆ.
Published on

ಹರಪನಹಳ್ಳಿ: ಕೆರೆ ಏರಿಯಿಂದ ಕೆಳಗೆ ಜಾರುತ್ತಿದ್ದ ಸಾರಿಗೆ ಬಸ್ಸನ್ನು ಚಾಲಕನ ಸಮಯ ಪ್ರಜ್ಞೆಯಿಂದ ನಿಲ್ಲಿಸಿ ದೊಡ್ಡ ಅನಾಹುತ ತಪ್ಪಿಸಿದ್ದರಿಂದ ಶಾಲಾ ಮಕ್ಕಳು ಸೇರಿ ಅನೇಕರು ಪಾರಾದ ಘಟನೆ ತಾಲೂಕಿನ ಅಲಮರಸಿಕೇರಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ.

ಹರಪನಹಳ್ಳಿ ಘಟಕದ ಬಸ್ ಕಾಲೇಜು ವಿದ್ಯಾರ್ಥಿಗಳನ್ನು ಹೊತ್ತು ಮಾಡ್ಲಗೇರಿ ತಾಂಡಾದಿಂದ ಹರಪನಹಳ್ಳಿ ಕಡೆಗೆ ಬೆಳಗ್ಗೆ ಸಂಚರಿಸುತ್ತಿತ್ತು. ಅಲಮರಸಿಕೇರಿ ಗ್ರಾಮದ ಕೆರೆಯ ಏರಿಯ ತಿರುವಿನಲ್ಲಿ ಎದುರಿಗೆ ವಾಹನಗಳು ಬಂದಿದ್ದರಿಂದ ಚಾಲಕ ಬಲಭಾಗಕ್ಕೆ ಬಸ್ ಕೊಂಡೊಯ್ಯಬೇಕಾಯಿತು. ಆಗ ನಿಯಂತ್ರಣ ತಪ್ಪಿದ ಬಸ್ ಕೆರೆ ಏರಿ ಯಿಂದ ಕೆಳಗೆ ಜಾರಲಾರಂಭಿಸಿತು. ಕೂಡಲೇ ಎಚ್ಚೆತ್ತುಕೊಂಡ ಚಾಲಕ ಮೌನೇಶ ಬಸ್ ನಿಲ್ಲಿಸಿ ವಿದ್ಯಾರ್ಥಿಗಳ ಸಹಿತ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಕೆಳಗಿಳಿಸಿ ಅನಾಹುತ ತಪ್ಪಿಸಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಕಾಮಗಾರಿ ಅಪೂರ್ಣ

ಗೌರಿಹಳ್ಳಿ ಕ್ರಾಸ್ ನಿಂದ ಮಾಡ್ಲಗೇರಿ ತಾಂಡಾದವರೆಗೆ ಡಾಂಬರ್ ರಸ್ತೆ ಕಾಮಗಾರಿ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ ಗುತ್ತಿಗೆದಾರರು ರಸ್ತೆ ಕಾಮಗಾರಿ ಅಪೂರ್ಣ ಮಾಡಿ ತಡೆಗೋಡೆ ನಿರ್ಮಿಸದೆ ಹಾಗೆ ಬಿಟ್ಟಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಬೇಕು ಹಾಗೂ ಕೂಡಲೇ ಕೆರೆ ಏರಿಯ ಮೇಲೆ ತಡೆಗೋಡೆ ನಿರ್ಮಿಸಬೇಕು ಎಂದು ಗ್ರಾಮದ ಮುಖಂಡ ಎಂ.ಕೋಟೆಪ್ಪ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net