ಬಳ್ಳಿ ತಿಂದು 16 ಕುರಿಗಳು ಸಾವು

11_RTL_1A_SHEEP
ರಟ್ಟಿಹಳ್ಳಿ ತಾಲೂಕಿನ ದೊಡ್ಡಗುಬ್ಬಿ ಗ್ರಾಮದ ಬಳಿ ಮಲೆನಾಡು ಅವರೆ ಬಳ್ಳಿ ಸೇವಿಸಿ ಅಸ್ವಸ್ಥಗೊಂಡ ಕುರಿಗಳಿಗೆ ಪಶು ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದರು.
Published on

ರಟ್ಟಿಹಳ್ಳಿ: ಮಲೆನಾಡು ಅವರೆ ಬಳ್ಳಿ ತಿಂದು ಸ್ಥಳದಲ್ಲಿಯೇ 16 ಕುರಿಗಳು ಮೃತಪಟ್ಟಿದ್ದು, 30 ಕುರಿಗಳು ತೀವ್ರ ಅಸ್ವಸ್ಥಗೊಂಡ ಘಟನೆ ತಾಲೂಕಿನ ದೊಡ್ಡಗುಬ್ಬಿ ಗ್ರಾಮದ ಮಕರಿ ರಸ್ತೆಯಲ್ಲಿನ ಕೆರೆಯೊಂದರ ಬಳಿ ಸೋಮವಾರ ಸಂಭವಿಸಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವಳಕಿ ಗ್ರಾಮದ ಹುಲಿಯಪ್ಪ ಸಿದ್ದಪ್ಪ ಮದಾಳೆ ಎಂಬುವರು ಕೆಲವು ವರ್ಷಗಳಿಂದ ತಮ್ಮ ಕುರಿಗಳೊಂದಿಗೆ ಈ ಭಾಗದಲ್ಲಿ ಬಂದು ವಾಸವಾಗಿದ್ದರು. 45ಕ್ಕೂ ಹೆಚ್ಚು ಕುರಿಗಳು ಇರುವ ಹಿಂಡನ್ನು ಕುರಿಗಾಹಿಗಳು ಎಂದಿನಂತೆ ಮೇಯಿಸಲು ದೊಡ್ಡಗುಬ್ಬಿ ರಸ್ತೆ ಕಡೆಗೆ ತೆರಳಿದ್ದರು. ಈ ವೇಳೆ ಜಮೀನಿನ ಬಳಿ ಇದ್ದ ಮಲೆನಾಡು ಅವರೆ ಬಳ್ಳಿ ತಿಂದ ಕುರಿಗಳು ಕೂಡಲೇ ನೆಲಕ್ಕೆ ಬಿದ್ದು ಉರುಳಾಡಿ ಕೆಲವು ಮೃತಪಟ್ಟಿವೆ. ರಟ್ಟಿಹಳ್ಳಿಯ ಪಶು ಆಸ್ಪತ್ರೆ ವೈದ್ಯರು ಸ್ಥಳಕ್ಕೆ ಬಂದು, ತೀವ್ರ ಅಸ್ವಸ್ಥಗೊಂಡಿದ್ದ ಕುರಿಗಳಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದರು.

ಕಷ್ಟ-ನಷ್ಟದಿಂದ ಊರು ತೊರೆದು ಕುರಿಗಳ ಮೇಲೆ ಜೀವನ ಅವಲಂಬಿಸಿ ಜೀವನ ಸಾಗಿಸುತ್ತಿದ್ದೇವೆ. ಈ ವಿಷಪೂರಿತ ಬಳ್ಳಿ ತಿಂದು ಒಮ್ಮೆಲೆ 16 ಕುರಿಗಳು ಮೃತಪಟ್ಟಿವೆ. ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಕುರಿಗಳ ಮಾಲೀಕ ಹುಲಿಯಪ್ಪ ಅಳಲು ತೋಡಿಕೊಂಡರು.

ಮಲೆನಾಡು ಅವರೆ ಬಳ್ಳಿಯಲ್ಲಿರುವ ವಿಷಪೂರಿತ ಅಂಶ ಕುರಿಗಳ ಸಾವಿಗೆ ಕಾರಣವಾಗಿದೆ. 16 ಕುರಿಗಳು ಮೃತಪಟ್ಟಿದ್ದು 30 ಕುರಿಗಳಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿವೆ. 6 ತಿಂಗಳು ಮೇಲ್ಪಟ್ಟ ಮೃತಪಟ್ಟ ಕುರಿಗಳಿಗೆ ಸರ್ಕಾರದ ಅನುಗ್ರಹ ಯೋಜನೆಯಡಿ ತಲಾ 5 ಸಾವಿರ ರೂ.ದಂತೆ ಪರಿಹಾರ ದೊರಕುತ್ತದೆ. ಈ ಕುರಿತು ಈಗಾಗಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುರಿ ಮತ್ತು ಉಣ್ಣೆ ನಿಗಮಕ್ಕೆ ವರದಿ ಕಳುಹಿಸಲಾಗುವುದು. | ರಾಘವೇಂದ್ರ ಎಲಿವಾಳ, ಸಹಾಯಕ ನಿರ್ದೇಶಕ ಪಶು ಆಸ್ಪತ್ರೆ ರಟ್ಟಿಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net