ಬಳ್ಳಾರಿ : ದೈಹಿಕ ಮತ್ತು ಮಾನಸಿಕ ಮನೋಲ್ಲಾಸಕ್ಕೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದರು.
ಇಲ್ಲಿಯ ವಿಎಸ್‌ಕೆ ವಿವಿಯಲ್ಲಿ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಅಂತರ್ ಮಹಾವಿದ್ಯಾಲಯ ಪುರುಷರ ಕಬಡ್ಡಿ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಶ್ರದ್ಧೆಯಿಂದ ಕ್ರೀಡೆಗಳನ್ನು ಕಲಿತುಕೊಂಡು ಆಡಬೇಕು. ಇದರಿಂದ ಆರೋಗ್ಯವೂ ವೃದ್ಧಿಸುತ್ತದೆ. ಕ್ರೀಡಾಪಟುಗಳಲ್ಲಿ ಸ್ಪರ್ಧಾ ಮನೋಭಾವ ಇರಬೇಕು. ಜೀವನದಲ್ಲಿ ಶಿಸ್ತು ಕಲಿಸಿಕೊಟ್ಟ ಶಾಲಾ ಮಟ್ಟದ ದೈಹಿಕ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಮನನ ಮಾಡಿಕೊಂಡರು.
ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿ, ಕ್ರೀಡೆಗಳಿಂದ ಮಾನಸಿಕ ಒತ್ತಡವನ್ನು ನಿಭಾಯಿಸಬಹುದು. ಕ್ರೀಡೆ ಮತ್ತು ಸಂಸ್ಕೃತಿಯನ್ನು ಅನುಭವಿಸುವುದರ ಜತೆಗೆ ಆಸ್ವಾದಿಸಬೇಕು. ದೇಸಿ ಕಲೆಗಳಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಹೊಣೆ. ಕ್ರೀಡಾಂಗಣ ನಿರ್ಮಾಣ ಮತ್ತು ಕ್ರೀಡಾ ವಿಭಾಗಕ್ಕೆ ಪ್ರತ್ಯೇಕ ಕಟ್ಟಡಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುವುದು ಎಂದರು.
ನಿ. ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರಗೌಡ ಮಾತನಾಡಿ, ದೈಹಿಕ ಸದೃಢತೆ ಕಾಪಾಡಿಕೊಳ್ಳುವುದು ಪ್ರತಿ ಕ್ರೀಡಾಪಟುವಿನ ಮೊದಲ ಆದ್ಯತೆ ಆಗಬೇಕು. ಮುಂಬರುವ ಓಲಿಂಪಿಕ್ಸ್ ಕ್ರೀಡೆಗಳಲ್ಲಿ ಕಬಡ್ಡಿ ಮತ್ತು ಖೋ-ಖೋ ಕ್ರೀಡೆಗಳನ್ನು ಆರಂಭಿಸಲು ಸರ್ಕಾರಕ್ಕೆ ಮನವಿ ಪತ್ರ ನೀಡಲಾಗಿದೆ ಎಂದರು. ವಿವಿ ಅಧೀನದ 15 ವಿವಿಧ ಮಹಾವಿದ್ಯಾಲಯಗಳ ದೈಹಿಕ ಶಿಕ್ಷಣ ಸಂಯೋಜಕರು, ಪ್ರಾಧ್ಯಾಪಕರು ಸೇರಿದಂತೆ 150ಕ್ಕೂ ಹೆಚ್ಚು ಸ್ಫರ್ಧಾಳುಗಳು ಇದ್ದರು.