ಬಳ್ಳಾರಿ ಒನ್ ಕೇಂದ್ರದಲ್ಲಿ ೭೫ ಲಕ್ಷ ರೂ. ಕಳವು

Published on

ಬಳ್ಳಾರಿ : ಇಲ್ಲಿನ ಮಹಾನಗರ ಪಾಲಿಕೆಯಲ್ಲಿನ ಬಳ್ಳಾರಿ ಓನ್ ಸಮಗ್ರ ನಾಗರೀಕ ಸೇವಾ ಕೇಂದ್ರದಲ್ಲಿ ೭೫ ಲಕ್ಷ ರೂ. ಕಳ್ಳತನವಾಗಿದೆ ಎಂದು ಇಲ್ಲಿನ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯುತ್, ಬಿಲ್ ಸೇರಿ ವಿವಿಧ ರೀತಿಯ ತೆರಿಗೆ ರೂಪದಲ್ಲಿ ಸಾರ್ವಜನಿಕರು ಬಳ್ಳಾರಿ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರದಲ್ಲಿ ಪಾವತಿಸಿರುವ ಒಟ್ಟು ೯೩ ಲಕ್ಷ ರೂ.ಗಳ ಪೈಕಿ ೭೫ ಲಕ್ಷ ರೂ.ಗಳು ಮತ್ತು ಸಿಸಿಟಿವಿಯಿಂದ ಸೆರೆಯಾದ ವೀಡಿಯೋವನ್ನು ಸಂಗ್ರಹಿಸುವ ಸಿವಿಆರ್‌ನ್ನು ಕಳವು ಮಾಡಲಾಗಿದೆ. ಆದರೆ, ಕೇಂದ್ರದ ಬಾಗಿಲು, ಕಿಟಕಿ ಯಾವುದನ್ನು ಮುರಿದಿರುವ ಹಾಗೂ ಹಾನಿಗೊಳಿಸುವುದು ಯಾವುದೂ ನಡೆದಿಲ್ಲ. ಕೇಂದ್ರವನ್ನು ನಿರ್ವಹಿಸುವ ಅಂದ್ರಾಳ್ ಮೂಲದ ಮಹಾಲಿಂಗ ಎನ್ನುವವರು ಹಿಂದಿನ ರಾತ್ರಿ ಕೇಂದ್ರಕ್ಕೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಬೀಗ ಮನೆಯ ಮುಂದೆ ಬಿದ್ದಿದ್ದು, ಅನುಮಾನಗೊಂಡು ಕೇಂದ್ರಕ್ಕೆ ಬಂದು ನೋಡಿದಾಗ ೭೫ ಲಕ್ಷ ರೂ. ಕಳುವಾಗಿರುವುದು ಕಂಡುಬAದಿದೆ. ಈ ಕುರಿತು ಕರ್ನಾಟಕ ಒನ್ ಯೋಜನಾ ನಿರ್ದೇಶಕ ಉದಯಕುಮಾರ್ ಎನ್ನುವವರು, ಕೇಂದ್ರದ ಮಹಾಲಿಂಗ ಎನ್ನುವವರ ಮೇಲೆ ಸಂಶಯ ವ್ಯಕ್ತಪಡಿಸಿ ನೀಡಿದ ದೂರಿನ ಮೇರೆಗೆ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಠಾಣೆಯ ಸಿಪಿಐ ಸಿದ್ದರಾಮೇಶ್ವರ ಗಡಾದ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net