

ಕಂಪ್ಲಿ: ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮುಂದಾಗಬೇಕೆಂದು ಶಾಸಕ ಜೆ.ಎನ್.ಗಣೇಶ್ ಒತ್ತಾಯಿಸಿದರು.
15ನೇ ಹಣಕಾಸು ಯೋಜನೆಯಡಿ ಪಟ್ಟಣದ ಹೊಸ ಬಸ್ ನಿಲ್ದಾಣ ಹತ್ತಿರ ಸರ್ವೇ ನಂ.1419/2ರ 0.69ಎಕರೆ ವಿಸ್ತೀರ್ಣದಲ್ಲಿ 29.90 ಲಕ್ಷ ರೂಪಾಯಿ ವೆಚ್ಚದಲ್ಲಿ ಪೌರ ಕಾರ್ಮಿಕರ ವಿಶ್ರಾಂತಿಗೃಹ ನಿರ್ಮಾಣಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಬೇರೆ ಜಿಲ್ಲೆಗಳ ಅಭಿವೃದ್ಧಿಗೆ ಸಿಗುತ್ತಿರುವ ಆದ್ಯತೆ ಬಳ್ಳಾರಿಗೆ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದು, ಜನತೆಗೆ ನ್ಯಾಯ ಒದಗಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕಂಪ್ಲಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ ಸೇರಿದಂತೆ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಅಂಬೇಡ್ಕರ್ ವೃತ್ತದ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ಮಂಜೂರಾಗಿದ್ದು, ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಉಳಿದ ವೃತ್ತಗಳನ್ನು ಅಭಿವೃದ್ಧಿಗೊಳಿಸಲಾಗುವುದು. 39 ಕಾಯಂ ಪೌರಕಾರ್ಮಿಕರಿಗೆ ವಸತಿ ಒದಗಿಸಲು ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ 40.97ಲಕ್ಷ ರೂಪಾಯಿ ವೆಚ್ಚದಲ್ಲಿ 1.94 ಎಕರೆ ಪ್ರದೇಶದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಗಣೇಶ್ ತಿಳಿಸಿದರು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸದಸ್ಯರಾದ ಕೆ.ಎಸ್.ಚಾಂದ್ ಬಾಷ, ಸಿ.ಆರ್.ಹನುಮಂತ, ಪ್ರಮುಖರಾದ ಬಿ.ಸಿದ್ದಪ್ಪ, ಕೆ.ಷಣ್ಮುಖ, ಎನ್.ಹಬೀಬ್ ರೆಹಮಾನ್ ಇತರರಿದ್ದರು.