ಬಳ್ಳಾರಿ, 3.15 ಲಕ್ಷ ಕದ್ದು ಮಹಿಳೆ ಪರಾರಿ

Published on

ಬಳ್ಳಾರಿ: ಬಳ್ಳಾರಿಯ ಬ್ರೂಸ್‌ ಪೇಟೆ ಪೊಲೀಸ್‌ ಠಾಣೆಯ ಬ್ಯಾಂಕ್‌ವೊಂದರ ಬಳಿ ಕುಳಿತಿದ್ದ ವೃದ್ಧರೊಬ್ಬರ ಗಮನ ಬೇರೆಡೆ ಸೆಳೆದು ಮಹಿಳೆಯೊಬ್ಬಳು 3.15 ಲಕ್ಷ ಹಣ ಕದ್ದಿದ್ದಾಳೆ.
ಈ ಕುರಿತು ರಾಮಾಂಜಿನಿ (86) ಎಂಬುವವರು ದೂರು ದಾಖಲಿಸಿದ್ದು, ಅಪರಿಚಿತ ಮಹಿಳೆ ಸೇರಿ ಇಬ್ಬರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿರುವ ಬ್ಯಾಂಕ್‌ವೊಂದರ ಬಳಿ ರಾಮಾಂಜಿನಿ ಅವರು ₹3,15,000 ಅನ್ನು ಬಟ್ಟೆಯ ಚೀಲದಲ್ಲಿ ಸುತ್ತಿ ಪಕ್ಕದಲ್ಲಿಟ್ಟುಕೊಂಡು ಕುಳಿತಿದ್ದರು. ಈ ವೇಳೆ ಹುಡುಗನೊಬ್ಬನ ಜತೆ ಸ್ಥಳಕ್ಕೆ ಬಂದ ಮಹಿಳೆ ‘ಇದು ಯಾವ ಬ್ಯಾಂಕ್ ತಾತ’ ಎಂದು ಪ್ರಶ್ನಿಸಿದ್ದಾಳೆ. ನಂತರ ಗಮನ ಬೇರೆಡೆ ಸೆಳೆದು ಹಣದ ಚೀಲ ತೆಗೆದುಕೊಂಡು ಪರಾರಿಯಾಗಿದ್ದಾಳೆ ಎಂದು ರಾಮಾಂಜಿನಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net