

ಚಿತ್ರದುರ್ಗ: ನಮ್ಮ ಮಾತೃಭಾಷೆ ಕನ್ನಡವನ್ನು ಬಳಸುವ ಮೂಲಕ ಉಳಿಸಿ ಬೆಳೆಸಬೇಕಿದೆ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಎಸ್‌ಜೆಎಂ ದಂತ ಮಹಾವಿದ್ಯಾಲಯದಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಕನ್ನಡ ಕಲರವ’ ಕಾ ರ‌್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. 900 ವರ್ಷಗಳ ಹಿಂದಿನ ಶಾಸನಗಳಲ್ಲೂ ಕನ್ನಡವನ್ನು ಕಾಣಬಹುದಾಗಿದೆ. ವಚನಗಳನ್ನು ಕನ್ನಡದಲ್ಲಿ ರಚಿಸುವ ಮೂಲಕ ಶರಣರ ಸಹಿತ ಅನೇಕರು ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ಪರಕೀಯರು ನಮ್ಮನ್ನು ಆಳಿದ್ದರ ಫಲವಾಗಿ ಇಂದು ಪರಕೀಯ ಭಾಷೆಯ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ‌್ಯದರ್ಶಿ ಹುರುಳಿ ಎಂ.ಬಸವರಾಜ್ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಡಾ. ಎಂ.ಎಚ್.ರಘುನಾಥ್‌ರೆಡ್ಡಿ, ಉಪ ಪ್ರಾಚಾರ‌್ಯೆ ಹರಿಣಿ ಮತ್ತಿತರರು ಇದ್ದರು.