ಬಳಕೆಯಾಗದ ಸಿಎ ಸೈಟ್ ವಾಪಸ್ ಪಡೆಯಲು ಚರ್ಚೆ

h28- Huda Meet
Published on

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿನಗರದ ವಿವಿಧೆಡೆ ಸಂಘ- ಸಂಸ್ಥೆಗಳು ಪಡೆದುಕೊಂಡು ಖಾಲಿ ಬಿಟ್ಟಿರುವ ನಾಗರಿಕ ಸೌಲಭ್ಯಗಳ (ಸಿಎ) ನಿವೇಶನಗಳನ್ನು ವಾಪಸ್ ಪಡೆಯುವ ಕುರಿತು ಗಂಭೀರ ಚರ್ಚೆ ನಡೆದಿದೆ.
ನವನಗರದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಶುಕ್ರವಾರ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅಧ್ಯಕ್ಷತೆಯಲ್ಲಿ ನಡೆದ ಸಿಎ ಕಮಿಟಿ ಸಭೆಯಲ್ಲಿ ಈ ಬಗ್ಗೆ ರ್ಚಚಿಸಲಾಗಿದೆ.
ಈ ಹಿಂದೆ 357 ನಾಗರಿಕ ಸೌಲಭ್ಯದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅವುಗಳ ಪುನರ್ ಸರ್ವೆ ಕಾರ್ಯ ನಡೆಸಲಾಗಿದೆ. ಹಂಚಿಕೆ ಮಾಡಿದ್ದ ಸಿಎ ನಿವೇಶನಗಳನ್ನು ಕೆಲ ಸಂಘ ಸಂಸ್ಥೆಗಳು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಇನ್ನೂ ಕೆಲವರು ನಿವೇಶನಗಳನ್ನು ಖಾಲಿ ಬಿಟ್ಟಿರುವುದು ಕಂಡು ಬಂದಿದೆ. ಮಾತ್ರವಲ್ಲ, ಎಷ್ಟೋ ನಿವೇಶನಗಳನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಈ ಎಲ್ಲ ಹಿನ್ನೆಲೆಯಲ್ಲಿ ಯಾರು ಸಿಎ ನಿವೇಶನವನ್ನು ಸರಿಯಾಗಿ ಉಪಯೋಗ ಮಾಡಿಕೊಂಡಿಲ್ಲವೋ ಅಂಥವುಗಳನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ರ್ಚಚಿಸಲಾಯಿತು ಎಂದು ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು ತಿಳಿಸಿದ್ದಾರೆ.
69 ಸಿಎ ನಿವೇಶನ: ಅವಳಿನಗರದ ವಿವಿಧೆಡೆ 69 ಸಿಎ ನಿವೇಶನಗಳು ಖಾಲಿ ಇದ್ದು, ಅವುಗಳನ್ನು ಶೀಘ್ರ ಅರ್ಜಿ ಕರೆದು ಹಂಚಿಕೆ ಮಾಡಲಾಗುವುದು ಎಂದು ಹುಡಾ ಅಧ್ಯಕ್ಷರು ತಿಳಿಸಿದ್ದಾರೆ. ಹಂಚಿಕೆ ಸಂದರ್ಭದಲ್ಲಿ ಸರ್ಕಾರದ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು. ಸಮಾಜ ಕಲ್ಯಾಣ ಇಲಾಖೆ, ಅಂಗನವಾಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬಿಸಿಎಂ ಹಾಸ್ಟೆಲ್, ಸಮಾಜ ಕಲ್ಯಾಣ, ಎಂಸಿಎ ಮತ್ತು ಜಿಲ್ಲಾ ಆಯುಷ್ ಇಲಾಖೆಗೆ ನಿವೇಶನ ನೀಡಲಾಗುವುದು.
ಉಳಿದ ನಾಗರಿಕ ಸೌಲಭ್ಯದ ನಿವೇಶನಗಳನ್ನು ವಿವಿಧ ಸಮಾಜ, ಸಂಘ ಸಂಸ್ಥೆಗಳಿಗೆ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗುವುದು. ಈಗಾಗಲೇ ನಿವೇಶನಕ್ಕಾಗಿ ಮನವಿ ಮಾಡಿದವರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಹುಡಾ ಅಧ್ಯಕ್ಷರು ತಿಳಿಸಿದ್ದಾರೆ. ಹುಡಾ ಆಯುಕ್ತ ಎನ್.ಎಚ್. ಕುಮ್ಮಣ್ಣನವರ, ಕಮಿಟಿ ಸದಸ್ಯರಾದ ಚಂದ್ರಶೇಖರ ಗೋಕಾಕ, ಮೀನಾಕ್ಷಿ ಒಂಟಮೂರಿ, ಎಂ. ರಾಜಶೇಖರ, ಮುಕುಂದ ಜೋಶಿ, ಮೌನೇಶ ಬಡಿಗೇರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net