

ಚಿತ್ರದುರ್ಗ: ಪ್ರಗತಿಗೆ ಆಶಾ, ಸಾಧನೆಗೆ ಸ್ಪೂರ್ತಿ, ನಗು ನಲಿವಿಗೆ ನಂದಾ, ಬದುಕಿಗೆ ದಾರಿದೀಪವಾಗಿ ಕತ್ತಲನ್ನು ಸರಿಸಿ, ಸಮೃದ್ಧಿಯ ಬೆಳಕನ್ನು ಚೆಲ್ಲಲ್ಲಿ ಎಂಬ ಸದುದ್ದೇಶದೊಂದಿಗೆ ಆಚರಿಸುವ ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ.
ಕೋಟೆನಗರಿ ಸೇರಿ ಜಿಲ್ಲಾದ್ಯಂತ ನರಕ ಚತುರ್ದಶಿ, ದೀಪಾವಳಿ ಅಮಾವಾಸ್ಯೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗಿದ್ದು, ಮಂಗಳವಾರ ನಡೆಯಲಿರುವ ಬಲೀಂದ್ರ ಪೂಜೆಗೆ ಸೋಮವಾರವೇ ಅತ್ಯುತ್ಸಾಹದಿಂದ ಜನ ಭರದ ಸಿದ್ಧತೆಯಲ್ಲಿ ನಿರತರಾದರು. ಪೂಜಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಮುಂದುವರೆದಿದ್ದು, ಮಾರುಕಟ್ಟೆಗಳ ಬಳಿ ಬಹುತೇಕರು ಮುಗಿಬಿದ್ದ ದೃಶ್ಯ ವಿವಿಧೆಡೆ ಕಂಡು ಬಂದಿತು.
ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬಹುತೇಕರು ತಮ್ಮ ನೆಂಟರು, ಬಂಧು, ಮಿತ್ರರನ್ನು ಸ್ವಾಗತಿಸಿ ಸಂಭ್ರಮದಲ್ಲಿ ತೇಲಾಡಿದರು. ಕೆಲವರು ಬಲಿಪಾಡ್ಯಮಿ ಸೋಮವಾರ ಮಧ್ಯಾಹ್ನಕ್ಕೆ ಮುಕ್ತಾಯವಾಗಲಿದೆ ಎಂದು ದೇವರಿಗೆ ಎಡೆ ಸಮರ್ಪಿಸಿ, ಹಬ್ಬ ಆಚರಿಸಿದರು.
ಬೆಚ್ಚಿಬಿದ್ದ ಚಿಣ್ಣರು: ಕತ್ತಲು ಆವರಿಸುತ್ತಿದ್ದಂತೆ ಬಾನಂಗಳದಲ್ಲಿ ಪಟಾಕಿಗಳ ಸದ್ದು ಮೊಳಗಿದವು. ಅದರಿಂದ ಚಟಪಟ ಎನ್ನುತ್ತಲೇ ಹೊರಬಂದ ವಿವಿಧ ವರ್ಣದ ಬೆಂಕಿಯ ಕಿಡಿ ಮಕ್ಕಳನ್ನು ಆಕರ್ಷಿಸಿತು. ಆದರೆ, ಢಮ್ ಢಮ್ ಸದ್ದಿನ ಸಿಡಿಮದ್ದು ಹಲವೆಡೆ ಎರಡು ವರ್ಷದೊಳಗಿನ ಚಿಣ್ಣರನ್ನು ಬೆಚ್ಚಿಬೀಳಿಸಿದವು.
ಅತ್ಯಂತ ಪ್ರಮುಖವಾಗಿ ಈ ಹಬ್ಬದಲ್ಲಿ ಬಳಸುವ ಪೂಜಾ ಸಾಮಗ್ರಿಗಳಾದ ವೈವಿಧ್ಯಮಯ ಅಣತೆಗಳು, ಹೊಂಬಾಳೆ, ಕಂಚಿಕಡ್ಡಿ, ಬ್ರಹ್ಮದಂಡೆ ಗಿಡ, ಬಿಲ್ವ ಪತ್ರೆ, ತಂಗಟೆ ಮತ್ತು ತುಂಬೆ ಹೂ, ವಿವಿಧ ಹಣ್ಣುಗಳು, ಬಾಳೆ ಎಲೆ, ಮಾವಿನ ಎಲೆ, ಬಾಳೆ ದಿಂಡು ಸೇರಿ ಇತರೆ ವಸ್ತುಗಳ ಖರೀದಿ ಭರಾಟೆಯೂ ಆನೆಬಾಗಿಲು ಮಾರ್ಗ, ಸಂತೆಹೊಂಡ, ಗಾಂಧಿ ವೃತ್ತದ ಸಮೀಪದಲ್ಲಿ ಜೋರಾಗಿ ನಡೆಯಿತು.
ವಸ್ತ್ರೋದ್ಯಮಕ್ಕೂ ಬೇಡಿಕೆ: ಬಲಿಪಾಡ್ಯಮಿಯಂದು ಹಲವರು ಹಿರಿಯರ ಹಬ್ಬ ಆಚರಿಸುವ ಸಂಪ್ರದಾಯವಿದೆ. ಹೀಗಾಗಿ ಗದ್ದಿಗೆ ಮೇಲಿಟ್ಟು ಪೂಜಿಸಲು, ಧರಿಸಲು ಹೊಸ ಬಟ್ಟೆ ಖರೀದಿಸುವ ಸಲುವಾಗಿ ಗ್ರಾಮೀಣ ಭಾಗದಿಂದ ಅನೇಕರು ನಗರಕ್ಕೆ ಬಂದಿದ್ದರು. ಇದರಿಂದ ಬಟ್ಟೆ ಅಂಗಡಿಗಳಲ್ಲೂ ಜನಸಂದಣಿ ಹೆಚ್ಚಾಗಿತ್ತು. ಗ್ರಾಹಕರ ಸದಭಿರುಚಿಗೆ ತಕ್ಕಂತೆ ಆಕರ್ಷಕ ಉಡುಪುಗಳನ್ನು ಕಣ್ಣಿಗೆ ರಾಚುವ ಹಾಗೆ ಹಾಕಲಾಗಿತ್ತು. ತಮಗಿಷ್ಟವಾದುದ್ದನ್ನು ಖರೀದಿಸಲು ಮುಂದಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೀದಿ ಬದಿಯ ವ್ಯಾಪಾರವೂ ಗಮನ ಸೆಳೆಯಿತು. ಒಟ್ಟಾರೆ ವಸ್ತ್ರೋದ್ಯಮಕ್ಕೂ ಬೇಡಿಕೆ ಕಂಡು ಬಂದಿತು.
ವಿವಿಧ ವಿನ್ಯಾಸದ 20-30 ರೂ.ಗಳಿಂದ 400-500 ರೂ.ವರೆಗಿನ ಮಣ್ಣಿನ ಅಣತೆಗಳನ್ನು ವ್ಯಾಪಾರಸ್ಥರು ಆನೆ ಬಾಗಿಲು ಮಾರ್ಗ ಸಮೀಪ ಅಲ್ಲಲ್ಲಿ ಮಾರಾಟ ಮಾಡುತ್ತಿದ್ದರು. ಆಕರ್ಷಕ ದೀಪಗಳು ಮಹಿಳೆಯರ ಗಮನ ಸೆಳೆದಿದ್ದರಿಂದ ಅನೇಕರು ಖರೀದಿಯಲ್ಲಿ ನಿರತರಾದರು. ತಲಾ ಒಂದೊಂದು ತೆಂಗಿನಕಾಯಿ 20 ರೂ.ಗಳಿಂದ 30 ರೂ.ವರೆಗೂ ಮಾರಾಟವಾದವು. ಹಣ್ಣುಗಳಿಗೂ ಬೇಡಿಕೆ ಕಂಡುಬಂದಿತು.
ಮನೆಗಳಲ್ಲಿ ಪ್ರತಿಷ್ಠಾಪಿಸುವ ಮಹಾಲಕ್ಷ್ಮೀ ದೇವಿ ಮೂರ್ತಿ, ಕಳಶದ ಹಾರ 250 ರೂ.ಗಳಿಂದ 500 ರೂ., ಹಿರಿಯರ ಪೂಜೆಗೂ ಇದೇ ದರದಲ್ಲಿ ಹಾರಗಳನ್ನು ಸಿದ್ಧಪಡಿಸಲಾಗಿತ್ತು. ದೇಗುಲಗಳಲ್ಲಿನ ದೇವರ ಮೂರ್ತಿಗಳಿಗೆ 500 ರೂ.ಗಳಿಂದ 5 ಸಾವಿರ ರೂ.ವರೆಗೂ ಭಕ್ತರ ಅಭಿರುಚಿಗೆ ತಕ್ಕಂತೆ ಹಾರಗಳನ್ನು ಮಾರಾಟಗಾರರು ತಯಾರಿಸಿದ್ದರು. ಅದರಂತೆಯೇ ಬಹುತೇಕ ಮಾರಾಟವಾದವು.
ಪರಿಸರ ಕುರಿತು ಇತ್ತೀಚಿನ ಕೆಲ ವರ್ಷಗಳಿಂದ ವ್ಯಾಪಕ ಅರಿವು ಮೂಡಿಸುತ್ತಿರುವ ಪರಿಣಾಮ, ಹಸಿರು ಪಟಾಕಿಗಳನ್ನೇ ಮಾರಾಟ ಮತ್ತು ಬಳಸಲು ಅವಕಾಶ ನೀಡಿರುವ ಕಾರಣ ಅವುಗಳನ್ನೇ ಅನೇಕರು ವ್ಯಾಪಾರಸ್ಥರ ಬಳಿ ಕೇಳಿ ಖರೀದಿಸಲು ಮುಂದಾದರು. ಒಬ್ಬೊಬ್ಬರು 500 ರೂ.ಗಳಿಂದ 5ಸಾವಿರ ರೂ.ಗಳವರೆಗೂ ಖರೀದಿಯಲ್ಲಿ ತೊಡಗಿದರು. ಬಾಕ್ಸ್ ಪಟಾಕಿಗಳು 400 ರೂ.ಗಳಿಂದ 2ಸಾವಿರ ರೂ.ವರೆಗೂ ಮಾರಾಟವಾದವು.