

ಮೂಡಿಗೆರೆ: ಕಳೆದ ವಿಧಾನಸಭಾ ಚುನಾವಣಾ ಸೋಲಿನ ಬಳಿಕ ಸಂಕಷ್ಟದಲ್ಲಿದ್ದ ಬಿಜೆಪಿ ಈಗ ಬಲಿಷ್ಠವಾಗಿ ಬೆಳೆಯುತ್ತಿದೆ. ಪಕ್ಷದಲ್ಲಿ ಇದೇ ರೀತಿಯ ವಾತಾವರಣ ಮುಂದುವರಿದು 2028 ಅಥವಾ ಅದಕ್ಕಿಂತ ಮೊದಲೇ ಘೋಷಣೆಯಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಗಳಿಸಿ ಅಧಿಕಾರ ಹಿಡಿಯಲಿದೆ ಎಂದು ಕೊಳ್ಳೇಗಾಲದ ಮಾಜಿ ಶಾಸಕ ಎನ್.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಬಾಳೂರು ಹೋಬಳಿ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಜನರಿಗೆ ನೀಡಿದ್ದ ಗ್ಯಾರಂಟಿ ಯೋಜನೆಯ ಭರವಸೆಯನ್ನು ಈಡೇರಿಸದೆ ಸತಾಯಿಸಿದಾಗ ಬಿಜೆಪಿ ಹೋರಾಟ ನಡೆಸಬೇಕಾಯಿತು. ರಾಜ್ಯದ ಅಭಿವೃದ್ಧಿಗೆ ಹಣವಿಲ್ಲದೆ ಸರ್ಕಾರ ಕಂಗಾಲಾಗಿದೆ. ಸರ್ಕಾರಿ ನೌಕರರಿಗೆ ವೇತನ ನೀಡಲು ಖಜಾನೆಯಲ್ಲಿ ಹಣವಿಲ್ಲ. ರಸ್ತೆ ಗುಂಡಿ ಮುಚ್ಚಲು ಮತ್ತು ರಾಜ್ಯದ ಜನರಿಗೆ ಕುಡಿಯುವ ನೀರೊದಗಿಸಲು ಹಣವಿಲ್ಲ ಎಂದು ದೂರಿದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಬಿಜೆಪಿಯನ್ನು ಬೂತ್ ಮಟ್ಟದಿಂದ ಸಂಘಟಿಸಲಾಗುತ್ತದೆ. ಲೋಕಸಭೆ ಚುನಾವಣೆ ನಂತರ ಬಲವಾದ ಸಂಘಟನೆಯಿಂದ ಪಕ್ಷ ಬೆಳೆದಿದೆ. ಸದ್ಯದಲ್ಲೇ ನಡೆಯಲಿರುವ ಜಿಪಂ, ತಾಪಂ ಚುನಾವಣೆಗೆ ತಯಾರಿ ನಡೆಸಲಾಗಿದೆ. ಕಾರ್ಯಕರ್ತರು ಚುನಾವಣೆ ಎದುರಿಸಲು ಸಜ್ಜುಗೊಂಡಿದ್ದಾರೆ ಎಂದರು.
ಬಾಳೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಬಿ.ಮಂಜುನಾಥ್ ಅಧಿಕಾರ ಸ್ವೀಕರಿಸಿದರು. ಉಪಸಭಾಪತಿ ಎಂ.ಕೆ.ಪ್ರಾಣೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ, ಎಂ.ಎಲ್.ವಿಜಯೇಂದ್ರ, ಜೆ.ಎಸ್.ರಘು, ಟಿ.ಎಂ.ಗಜೇಂದ್ರ, ಕೆ.ಆರ್.ಕೇಶವ, ಭರತ್, ಪ್ರಮೋದ್ ದುಂಡುಗ, ಬಿ.ಆರ್.ಬಾಲಕೃಷ್ಣ, ಪರೀಕ್ಷಿತ್ ಜಾವಳಿ ಇತರರಿದ್ದರು.