ಬಲಿಜ ಸಮಾಜ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರಲಿ

31bdvt1
ಭದ್ರಾವತಿಯಲ್ಲಿ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯ ಅವರ ಜಯಂತ್ಯುತ್ಸವವನ್ನು ಎಂಎಲ್‌ಸಿ ಎಂ.ಆರ್.ಸೀತಾರಾಮು ಉದ್ಘಾಟಿಸಿ ಮಾತನಾಡಿದರು. ಬಿ.ಕೆ.ಸಂಗಮೇಶ್ವರ್, ಎಚ್.ಆರ್.ರಂಗನಾಥ್, ಬಿ.ಕೆ.ಮೋಹನ್, ಜೆ.ಎಸ್.ಸಂಜೀವಮೂರ್ತಿ ಇತರರಿದ್ದರು.
Published on

ಭದ್ರಾವತಿ: ಬಲಿಜ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಈ ಸಮಸ್ಯೆ ಸರಿಪಡಿಸಿಕೊಂಡರೆ ಮಾತ್ರ ಸಮಾಜ ಬಲಾಢ್ಯವಾಗಿ ಬೆೆಳೆಯಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಎಂ.ಆರ್.ಸೀತಾರಾಮು ಹೇಳಿದರು. ನಗರದ ಬಲಿಜ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ಬಲಿಜ ಸಂಘ ಆಯೋಜಿಸಿದ್ದ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯ ಅವರ ಜಯಂತ್ಯುತ್ಸವ ಹಾಗೂ ಶ್ರೀಕೃಷ್ಣದೇವರಾಯ ರಸ್ತೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬಲಿಜ ಸಮುದಾಯದವರು ಯಾವುದೇ ಪಕ್ಷದಲ್ಲಿರಲಿ ಅವರನ್ನು ಸಂಘದಿಂದ ಪ್ರೋತ್ಸಾಹಿಸಿ ಒಗ್ಗಟ್ಟು ಪ್ರದರ್ಶಿಸುವ ಕೆಲಸ ಮಾಡಬೇಕು. ಆತ ಬೇರೆ ಪಕ್ಷದಲ್ಲಿದ್ದಾನೆ ಎಂದು ಕಾಲೆಳೆಯುವ ಕೆಲಸ ಮಾಡಿದರೆ ಸಮುದಾಯದ ಬೆಳವಣಿಗೆ ಸಾಧ್ಯವಿಲ್ಲ. ರಾಜಕೀಯವಾಗಿ ಸಮಾಜದ ವ್ಯಕ್ತಿಗಳು ಬೆಳೆಯಬೇಕು. ಆಗ ಸಮಾಜದ ಅಭಿವೃದ್ಧಿ ಸಾಧ್ಯ. ಈ ಹಿಂದೆ ರಾಜ್ಯದಲ್ಲಿ ಸಮಾಜದ 6 ಜನ ಶಾಸಕರಿದ್ದೆವು. ಈಗ ಎರಡಕ್ಕೆ ಇಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜಕಾರಣದಲ್ಲಿ ಹಲವಾರು ಜಾತಿಯವರಿದ್ದಾರೆ. ರಾಜಕಾರಣಿಗಳು ಆಯಾ ಸಮಾಜದ ಮೇಲೆ ಪ್ರೀತಿ, ವಿಶ್ವಾಸದ ಮೂಲಕ ಅಭಿವೃದ್ಧಿಗೆ ಕೊಡುಗೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ನಮ್ಮ ಸಮುದಾಯದ ನಾಯಕರು ರಾಜಕೀಯವಾಗಿ ಹೆಚ್ಚು ಬೆಳೆಯಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಸಮುದಾಯದವರು ಪ್ರತಿನಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನು ಪ್ರತಿನಿಸುವ ವ್ಯಕ್ತಿ ಇದ್ದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದರು. ಬಲಿಜ ಸಮುದಾಯದ ಸಮಸ್ಯೆಗಳಿಗೆ ಬಿ.ಕೆ.ಸಂಗಮೇಶ್ವರ್ ಕುಟುಂಬ ಸದಸ್ಯರು ಹೊರತುಪಡಿಸಿ ಮತ್ಯಾರೂ ಸ್ಪಂದಿಸಲು ಸಾಧ್ಯವಿಲ್ಲ. ಈಗ ಅವರ ಪುತ್ರ ರಾಜಕಾರಣದಲ್ಲಿ ತೊಡಗಿದ್ದಾರೆ. ಮುಂದಿನ ಯುವ ಪೀಳಿಗೆಯ ಸರದಿಯಲ್ಲಿ ಅವರ ಕುಟುಂಬವನ್ನೇ ನಮ್ಮ ಸಮುದಾಯ ಬೆಂಬಲಿಸಬೇಕು ಎಂದು ತಿಳಿಸಿದರು. ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ತಾಲೂಕಿನ ಬಲಿಜ ಸಮುದಾಯದ ಅಭಿವೃದ್ಧಿಗೆ ಶಾಸಕರು ಸಾಕಷ್ಟು ಶ್ರಮಿಸಿದ್ದಾರೆ. ಎಂ.ಆರ್.ಸೀತಾರಾಮು ಅವರು ಸಹ ಅನುದಾನವನ್ನು ಕ್ಷೇತ್ರಕ್ಕೆ ನೀಡಿದ್ದಾರೆ. ಶ್ರೀಕೃಷ್ಣದೇವರಾಯ ರಸ್ತೆ ಉದ್ಘಾಟನೆಯಲ್ಲಿ ಪಾಲ್ಗೊಂಡಿರುವುದು ನಮಗೆಲ್ಲರಿಗೂ ಸಂತಸವಾಗಿದೆ. ಸಮದಾಯದವರು ಬಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಸಮಾಜದ ಏಳಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ಬಲಿಜ ಸಂಘದ ತಾಲೂಕು ಅಧ್ಯಕ್ಷ ಎಚ್.ಆರ್.ರಂಗನಾಥ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಗಣೇಶ್, ಸಂಘದ ಗೌರವಾಧ್ಯಕ್ಷ ಜೆ.ಎಸ್.ಸಂಜೀವಮೂರ್ತಿ, ಎಸ್.ಎನ್,ಸುಬ್ರಹ್ಮಣ್ಯ, ಶಿವಕುಮಾರ್, ಮಹಮದ್ ಸನಾವುಲ್ಲಾ, ಹುಚ್ಚಪ್ಪ, ನಗರಸಭಾ ಸದಸ್ಯರಾದ ಅನುಪಮಾ ಚನ್ನೇಶ್, ಅನುಸುಧಾ ಮೋಹನ್, ಚನ್ನಪ್ಪ, ಬಸವರಾಜ್, ಕದಿರೇಶ್, ಸುದೀಪ್, ಮಂಜುನಾಥ್ ಕದಿರೇಶ್, ಜಂಗಮಪ್ಪ, ಗಂಗಾಧರ ಇತರರಿದ್ದರು.

ಕೈವಾರ ತಾತಯ್ಯ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗಾಗಿ ನಾನು ಹಾಗೂ ನನ್ನ ಕುಟುಂಬ ಸದಾ ಬಲಿಜ ಸಮುದಾಯದ ಜತೆಗೆ ಇರುತ್ತೇವೆ. ಬಿ.ಕೆ.ಸಂಗಮೇಶ್ವರ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net