

ಬಾಗೇಪಲ್ಲಿ : ಮುಖ್ಯರಸ್ತೆಯಿಂದ 100 ಮೀಟರ್ ದೂರದಲ್ಲಿ ಸಿ.ಎಲ್.7 ಬಾರ್ ಆ್ಯಂಡ್ ರೆಸ್ಟೋರೆಂಟ್ ಇರಬೇಕೆಂಬ ನಿಯಮದಿಂದ ಪಾರಾಗಲು ಸುಮಾರು 9 ದಶಕಗಳಿಂದ ಅಸ್ತಿತ್ವದಲ್ಲಿರುವ ಅಚಗಾನಪಲ್ಲಿ-ಪೋಲನಾಯಲನಹಳ್ಳಿ ರಸ್ತೆ ಮಾರ್ಗವನ್ನೇ ಬದಲಿಸಲು ಮುಂದಾಗಿರುವ ಬಲಾಢ್ಯರ ವಿರುದ್ಧ ಸಿಡಿದೆದ್ದಿರುವ ಬೂಡಿದಗಡ್ಡಪಲ್ಲಿ ಗ್ರಾಮಸ್ಥರು,
ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮಿಟ್ಟೇಮರಿ ಹೋಬಳಿ ಕೇಂದ್ರದಿಂದ ಚೇಳೂರು ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿನ ಅಚಗಾನಪಲ್ಲಿ-ಪೋಲನಾಯಕನಹಳ್ಳಿ ಮಧ್ಯದಲ್ಲಿ ಪ್ರಭಾವಿಯೊಬ್ಬರು ಪ್ರವಾಸೋದ್ಯೋಮ ಇಲಾಖೆಯ ಸಿ.ಎಲ್. 7 ಬಾರ್ ಆ್ಯಂಡ್ ರೆಸ್ಟೋರೆಂಟ್ ಬೃಹತ್ ಕಟ್ಟಡವನ್ನು ನಿರ್ಮಿಸಿದ್ದಾರೆ.
ಆದರೆ ಇತ್ತೀಚಿಗೆ ಸ್ಥಳ ಪರಿಶೀಲನೆಗೆ ಬಂದಿದ್ದ ಇಲಾಖೆ ಅಧಿಕಾರಿಗಳು ಕಟ್ಟಡ ಮುಖ್ಯರಸ್ತೆಗೆ ಹೊಂದಿಕೊಂಡಿದೆ ಎಂಬ ಕಾರಣವನ್ನು ನೀಡಿದ್ದರಿಂದ, ಈ ನಿಯಮದಿಂದ ತಪ್ಪಿಸಿಕೊಳ್ಳಲು ರಾಜಕೀಯ ಪ್ರಭಾವ ಬಳಸಿ ಲೋಕೋಪಯೋಗಿ ಇಲಾಖೆಯ ರಸ್ತೆಯ ಮಾರ್ಗವನ್ನೇ ಬದಲಾಯಿಸಲಾಗುತ್ತಿದ್ದು, ಇದಕ್ಕಾಗಿ ಡಾಂಬರ್ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಅಷ್ಟೇ ಅಲ್ಲದೆ ಬೂಡಿದಿಗಡ್ಡಪಲ್ಲಿ ಬಿ.ವಿ.ವೆಂಕಟರವಣಪ್ಪ, ಬಿ.ವಿ.ಬೈಯಪ್ಪ, ವಿ.ವೆಂಕಟರೆಡ್ಡಿ ಎಂಬುವರ ಜಮೀನಿನಲ್ಲಿ ಪರ್ಯಾಯ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಈ ಮಾಹಿತಿ ಪಡೆದ ಜಮೀನು ಮಾಲೀಕರು ಹಾಗೂ ಗ್ರಾಮಸ್ಥರು ಪರ್ಯಾಯ ರಸ್ತೆ ಕಾಮಗಾರಿಗೆ ಅಡ್ಡಿಪಡಿಸಿದ್ದಲ್ಲದೆ, ಚಾಲ್ತಿಯಲ್ಲಿರುವ ಮಿಟ್ಟೇಮರಿ-ಚೇಳೂರು ಮುಖ್ಯರಸ್ತೆಯ ಡಾಂಬರೀಕರಣವನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲಮಾಡಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.