ಬಲವಂತಪ್ಪಸ್ವಾಮಿ ದೇವಸ್ಥಾನಕ್ಕೆ ಬಂತು ಭಕ್ತಸಾಗರ

26. HBH. 4
Published on

ಹಗರಿಬೊಮ್ಮನಹಳ್ಳಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ತಾಲೂಕಿನೆಲ್ಲೆಡೆ ಶಿವ ದೇಗುಲಗಳಲ್ಲಿ ಶಿವ ನಾಮ ಸ್ಮರಣೆ ಹಾಗೂ ಓಂಕಾರದ ನಾದಲೀಲೆ ಕೇಳಿಬಂತು.

ಪಟ್ಟಣದ ಹಳೆಯ ಊರಿನ ಶ್ರೀ ಕಲ್ಲೇಶ್ವರ ದೇಗುಲದಲ್ಲಿ ಬೆಳಗ್ಗೆ ಸ್ವಾಮಿ ಮೂರ್ತಿಗೆ ಅಭಿಷೇಕ ನಂತರ ಪೂಜೆ ಜರುಗಿತು. ರಾಮನಗರದ ಸರ್ಕಾರಿ ಪ.ಪೂ.ಕಾಲೇಜ್ ಹತ್ತಿರದ ಈಶ್ವರ ದೇಗುಲ, ಕೆ.ವಿ.ಒ.ಆರ್. ಕಾಲನಿಯ ಪತ್ರಿಬಸವೇಶ್ವರ ಸ್ವಾಮಿ, ಗುರುಭವನ ಹತ್ತಿರದ ಮಲ್ಲಿಕಾರ್ಜುನ ಸ್ವಾಮಿ, ಬ್ಯಾಲಾಳ್ ಗ್ರಾಮದಲ್ಲಿನ ಈಶ್ವರ ದೇಗುಲದಲ್ಲಿ ವಿಶೇಷ ಪೂಜೆ ನಡೆದವು. ಭಕ್ತರು ಬೆಳಗಿನಿಂದಲೇ ದೇಗುಲಗಳಿಗೆ ಆಗಮಿಸಿ, ಭಕ್ತಿ-ಭಾವ ಮೆರೆದರು.

ಆನೇಕಲ್ ಗ್ರಾಮದ ಬಳಿ ಕಾಡಿನಲ್ಲಿರುವ ಬಲವಂತಪ್ಪ ಸ್ವಾಮಿ ದೇವಸ್ಥಾನಕ್ಕೆ ಹೊಸಪೇಟೆ, ಕೂಡ್ಲಿಗಿ ತಾಲೂಕುಗಳಿಂದ ಭಕ್ತರು ಆಗಮಿಸಿದ್ದರು. ಅಂಕಸಮುದ್ರದಲ್ಲಿರುವ ಕಲ್ಲೇಶ್ವರ ಸ್ವಾಮಿ, ಉತ್ತರ ತಂಬ್ರಹಳ್ಳಿ ಶಿವಪಾರ್ವತಿಯ ದೇಗುಲ, ನಂದಿಪುರ ಮಠದ ದೊಡ್ಡಬಸವೇಶ್ವರ ಸ್ವಾಮಿ, ಮೋರಗೆರೆಯ ಮೂಲಕಲ್ಲೇಶ್ವರ ಸ್ವಾಮಿ, ಮಹಾದೇವ ತಾತನ ಮಠ, ಅಂಬಳಿಯ ಐತಿಹಾಸಿಕ ಕಲ್ಲೇಶ್ವರ ಸ್ವಾಮಿ ದೇಗುಲ, ಹನಸಿಯ ಐತಿಹಾಸಿಕ ಪರಮೇಶ್ವರ ದೇಗುಲ, ಬೆಣಕಲ್ಲಿನ ಕಲ್ಲೇಶ್ವರ ದೇಗುಲದಲ್ಲಿ ಶಿವರಾತ್ರಿ ವಿಶೇಷ ಪೂಜೆಗಳು ನಡೆದವು.

ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಜ್ಯೋತಿರ್ಲಿಂಗ ದರ್ಶನ, ಸದ್ಭಾವನಾ ಯಾತ್ರೆ ನಡೆಯಿತು. ರಾಮನಗರದ ಈಶ್ವರ ದೇಗುಲ ಆವರಣದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಸಹಸ್ರಲಿಂಗ ದರ್ಶನ ಹಾಗೂ ಕುಂಭಕರ್ಣನನ್ನು ಎಬ್ಬಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಕ್ತರ ಒತ್ತಾಸೆ ಮೇರೆಗೆ ಸಹಸ್ರಲಿಂಗ ದರ್ಶನ ಕಾರ್ಯಕ್ರಮ ಗುರುವಾರವೂ ನಡೆಯಲಿದೆ ಎಂದು ಬ್ರಹ್ಮಕುಮಾರಿ ಬಸಮ್ಮ ಅಕ್ಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net