

ಮೈಸೂರು: ಬಲವಂತದ ಭೂಸ್ವಾಧೀನ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ವತಿಯಿಂದ ರೈತ-ಕೃಷಿ ಕೂಲಿಕಾರರ ಅನಿರ್ದಿಷ್ಟಾವಧಿ ಧರಣಿಯನ್ನು ಫೆ.10ರಂದು ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಕೈಗೊಳ್ಳಲಾಗಿದೆ.
ಬೃಹತ್ ವಿಧಾನಸೌಧ ಚಲೋ ಸಹ ಹಮ್ಮಿಕೊಂಡಿದ್ದು, ರೈತ- ಕೃಷಿ ಕೂಲಿಕಾರರ ಭೂಮಿ ಹಕ್ಕಿಗಾಗಿ ಸಹ ಒತ್ತಾಯಿಸಲಾಗುವುದು. ಭೂಮಿ, ಶ್ರಮ ಮತ್ತು ಬಂಡವಾಳ ಕ್ಷೇತ್ರದಲ್ಲಿ ಮುಂದಿನ ಹಂತದ ನವ ಉದಾರೀಕರಣ ಧೋರಣೆಗಳಿಗೆ ಅನುಸಾರವಾಗಿ ಸುಧಾರಣೆಗಳನ್ನು ದೊಡ್ಡ ಪ್ರಮಾಣದಲ್ಲಿ ಜಾರಿ ಮಾಡಲಾಗುತ್ತಿದೆ. ಇದು ಕಾರ್ಪೊರೇಟ್ ಪರ ಮೋದಿ ಸರ್ಕಾರ ಎಂಬಂತಾಗಿದೆ ಎಂದು ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ಎಚ್.ಆರ್.ನವೀನ್‌ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಇದೇ ವೇಳೆ ರಾಜ್ಯ ಸರ್ಕಾರವು ಸಹ ಕಾರ್ಪೊರೇಟ್ ಸಂಸ್ಥೆಗಳಿಗೆ ಲೂಟಿ ಮಾಡಲು ಅವಕಾಶ ಮಾಡಿಕೊಡುತ್ತಿದೆ. ಮೇಲಿಂದ ಮೇಲೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಂಡು ರಾಜ್ಯದ ರೈತ, ಕೂಲಿ ಕಾರ್ಮಿಕರ ಭೂಮಿ ಹಕ್ಕಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಸರ್ಕಾರಗಳ ಇಂತಹ ಧೋರಣೆಗಳಿಂದಾಗಿ ಮನೆ, ನಿವೇಶನರಹಿತರು, ಬಗರ್ ಹುಕುಂ, ಅರಣ್ಯ ಸಾಗುವಳಿ, ರೈತರ ಭೂಮಿ ಹಕ್ಕಿಗೆ ಗಂಭೀರ ಧಕ್ಕೆಯುಂಟಾಗಿದೆ. ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಮನೆ, ನಿವೇಶನ ಕೋರಿರುವವರು ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಈ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮುಖಂಡರಾದ ಎಂ.ಪುಟ್ಟಮಾದು, ಚಿಕ್ಕಣ್ಣೇಗೌಡ, ಎಂ.ಸಿ.ಚಂದ್ರಶೇಖರ್, ದೂರ ಲೋಕೇಶ್ ಇತರರಿದ್ದರು.