ಬರೆದಂತೇ ಬದುಕಿದ ತೇಜಸ್ವಿ

18bnk1 kasapa
ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ಕಾವ್ಯ ಸ್ಪಂದನ ಕಾರ್ಯಕ್ರಮದಲ್ಲಿ ವಿಜೇತರಾದ ಮಂಜುನಾಥ್ ರಾಠೋಡ್ ಬಿಜಾಪುರ, ಲಕ್ಷ್ಮಣ್ ಬಿ ಹೊಸಳ್ಳಿ, ವೇದಾ ಅಶೋಕ್ ಅವರಿಗೆ ಬಹುಮಾನವನ್ನು ವಿತರಿಸಲಾಯಿತು.
Published on

ಬಣಕಲ್: ಬದುಕಿದಂತೇ ಬರೆದ ಬರೆದಂತೇ ಬದುಕಿದ ತೇಜಸ್ವಿ ಅವರನ್ನು ವ್ಯಕ್ತಿಪೂಜೆ ಮಾಡದೇ ವಿಚಾರಪೂಜೆ ಅಥವಾ ವಿಚಾರಗಳನ್ನು ಅರಿಯುವುದು ಮುಖ್ಯ ಎಂದು ಲೇಖಕ ಡಾ. ಸಂಪತ್ ಬೆಟ್ಟಗೆರೆ ಹೇಳಿದರು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಬಣಕಲ್ ಕಸಾಪಯಿಂದ ಏರ್ಪಡಿಸಿದ್ದ ಕನ್ನಡ ಸಂಸ್ಕೃತಿ ಮತ್ತು ತೇಜಸ್ವಿ ವಿಚಾರಗೋಷ್ಠಿ ಹಾಗೂ ಕಾವ್ಯ ಸ್ಪಂದನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ತೇಜಸ್ವಿ ಅವರು ಮೂಡಿಗೆರೆಗೆ ಬಂದದ್ದು ಭಾಗ್ಯ. ತೇಜಸ್ವಿ ಅವರಿಗೆ ವಿಭಿನ್ನವಾದ ಅನುಭವವನ್ನು ನೀಡಿದ್ದು ಮೂಡಿಗೆರೆ. ವಿಜ್ಞಾನವನ್ನು ಕಲಾಕೃತಿಯ ದೃಷ್ಟಿಯಲ್ಲಿ ನೋಡುವ ಪ್ರಯತ್ನವನ್ನು ತೇಜಸ್ವಿ ಮಾಡಿದ್ದಾರೆ. ಬದುಕು ಸಂಸ್ಕೃತಿಯಾದರೆ ಸಂಸ್ಕೃತಿಯ ರೀತಿಯನ್ನು ದಾಖಲಿಸುವುದು ಸಾಹಿತ್ಯವಾಗುತ್ತದೆ ಎಂದರು.

ಇಂದು ತೇಜಸ್ವಿ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯ ಲಘುವಾಗಿ ಚಿತ್ರಿಸುವ ಪ್ರಯತ್ನಗಳು ಆಗುತ್ತಿರುವುದು ವಿಷಾಧಕರ. ತೇಜಸ್ವಿ ಅವರು ಜಾತ್ಯಾತೀತವಾದಿ ನಿಲುವಿನ ಚಿಂತಕ. ಅವರು ಎಂದಿಗೂ ಜಾತಿವಾದಿಯಲ್ಲ, ಪ್ರೀತಿಯ ಸಂತನಂತೆ ಬದುಕಿದವರು. ಆದರೆ ಇಂದು ಸುಳ್ಳಾದ ಪ್ರಕ್ಷಿಪ್ತಗಳನ್ನು ಸೃಷ್ಟಿಸಿದ ಬರವಣಿಗೆ ಮತ್ತು ಭಾಷಣಗಳಿಂದ ಅವರ ವಿಚಾರಗಳನ್ನು ತಪ್ಪಾಗಿ ಅರ್ಥೈಸಿ ವ್ಯಾಖ್ಯಾನಿಸಲು ಕೆಲವು ಸ್ವಹಿತಾಸಕ್ತಿ ಚಿಂತನೆಯವರು ಮಾಡುತ್ತಿರುವುದನ್ನು ನಾವು ಖಂಡಿಸುವ ಪ್ರಯತ್ನ ಮಾಡಬೇಕು ಎಂದರು. ಮೂಡಿಗೆರೆ ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮಾತನಾಡಿ, ಬಣಕಲ್ ಹೋಬಳಿ ಕಸಾಪ ಸಕ್ರಿಯವಾಗಿ ಸಾಹಿತ್ಯ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಉತ್ಸಾಹಿ ಯುವಕರ ತಂಡ ಈ ಘಟಕದಲ್ಲಿದ್ದು ನಿರಂತರವಾಗಿ ಸಾಹಿತ್ಯ ಕಾರ್ಯಗಳು ನಡೆಯಲಿ ಎಂದು ಹೇಳಿದರು.

ಭಾರತಿಯ ಕಿಸಾನ್ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಂಜಯಗೌಡ ಮಾತನಾಡಿ, ಕನ್ನಡ ಸಂಸ್ಕೃತಿಯ ಶ್ರೀಮಂತಿಕೆ ಯುವಪೀಳಿಗೆ ಅರಿಯಬೇಕಿದೆ. ಜಾನಪದ ಸೊಗಡಿನ ಗೀತೆಗಳು ಈ ಪರಂಪರೆಯ ಭಾಗವಾಗಿದ್ದು ಇದನ್ನು ಉಳಿಸಿ ಬೆಳೆಸಬೇಕಿದೆ ಎಂದರು. ಬಣಕಲ್ ಕಸಾಪ ಅಧ್ಯಕ್ಷ ಬಿ.ಕೆ.ಲೋಕೇಶ್ ಮಾತನಾಡಿ, ಕಾವ್ಯ ಸ್ಪಂದನದಲ್ಲಿ ಭಾಗವಹಿಸಿದ ಯುವಕವಿಗಳ ಕವನಗಳು ಪುಸ್ತಕ ರೂಪದಲ್ಲಿ ತರುವ ಯೋಚನೆ ಇದೆ. ಕಾವ್ಯ ಮನಸ್ಸನ್ನು ಪ್ರಪುಲ್ಲಗೊಳಿಸುತ್ತದೆ. ಕಾವ್ಯದ ಆಸ್ವಾದನೆ ಬದುಕಿನ ಜಂಜಾಟಗಳ ಒತ್ತಡವನ್ನು ಕೂಡ ಮರೆಸುತ್ತದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಬಿ.ಇ.ಬಿಳಿಯಪ್ಪ, ಕಸಾಪದ ಪ್ರಕಾಶ್ ಬಕ್ಕಿ, ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆಯ ರಾಜ್ಯ ಅಧ್ಯಕ್ಷ ಎಂ.ಎಸ್.ನಾಗರಾಜ್, ಕಸಾಪ ಪದಾಧಿಕಾರಿಗಳಾದ ಪೂರ್ಣೇಶ್ ಹೆಬ್ಬರಿಗೆ, ಭಕ್ತೇಶ್, ವಸಂತ್ ಹಾರ್‌ಗೋಡು, ಸುಪ್ರೀತ್ ಬೆಟ್ಟಗೆರೆ, ರಾಮಚಂದ್ರ, ಸಂಜಯಗೌಡ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್, ಸಂಗೀತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net