

ಕುಶಾಲನಗರ: ಕುವೆಂಪು ರಚಿಸಿದ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ದೊರೆತ ಮಾಣಿಕ್ಯಗಳು ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬಸವನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬರೆದಂತೆ ಬದುಕು ನಡೆಸಿದ ಮಹಾಚೇತನ ಕುವೆಂಪು. ಅವರ ಬರಹಗಳು ಮನುಷ್ಯನ ಸುಂದರ ಬದುಕಿನ ಸಾರ್ಥಕತೆಯ ಪ್ರತಿಬಿಂಬ ಎಂದರು.
ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್.ರುದ್ರಾಚಾರಿ ಮಾತನಾಡಿ, ವಿದ್ಯಾರ್ಥಿಗಳು ಕುವೆಂಪು ರಚಿತ ಸಾಹಿತ್ಯ ಕೃತಿಗಳನ್ನು ಅಭ್ಯಸಿಸುವ ಮೂಲಕ ಉತ್ತಮ ನಾಗರಿಕರಾಗಬೇಕು. ಸಾಹಿತ್ಯದ ಅಧ್ಯಯನ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಸುತ್ತದೆ. ಕುವೆಂಪು ಸಾಹಿತ್ಯ ಕೃಷಿಗೆ ಕಾಡು ಹಾಗೂ ಸುಂದರ ಪ್ರಕೃತಿ ಪ್ರೇರಣೆಯಾಗಿತ್ತು. ಆದರೆ, ಇಂದಿನ ಆಧುನಿಕ ಕಾಲಘಟ್ಟದಲ್ಲಿ ರೂಪುಗೊಳ್ಳುತ್ತಿರುವ ಸಾಹಿತ್ಯ ಹೆಚ್ಚು ಜೊಳ್ಳಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಕೆ.ವಿ.ಉಮೇಶ್, ನಿರ್ದೇಶಕ ಎಂ.ಎನ್.ಕುಮಾರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಎಸ್. ನಂದಿನಿ, ಪಿಡಿಒ ಶ್ಯಾಮ್, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಶ್ರೀದೇವಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್, ಮುಖ್ಯ ಶಿಕ್ಷಕಿ ಅಯಚ್ಚು, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಬಿಆರ್‌ಪಿ ಲೋಕೇಶ್, ಶಿಕ್ಷಕರಾದ ಗಿರೀಶ್, ಲಕ್ಷ್ಮಣ್ ಇತರರು ಇದ್ದರು.