

ಹಾಸನ: ಜಿಲ್ಲೆಯ ಜೀವನಾಡಿಯಾದ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ 9.443 ಟಿಎಂಸಿ ನೀರಿದ್ದು, ಇದರಲ್ಲಿ ಬಳಕೆಗೆ ಸಿಗುವ ನೀರು ಕೇವಲ 5.071 ಟಿಸಿಎಂ ನೀರು ಮಾತ್ರ. ಉಳಿಕೆ 4 ಟಿಎಂಸಿ ಡೆಡ್‌ಸ್ಟೋರೇಜ್ (ಬಳಕೆಗೆ ಬಾರದ ನೀರು) ಆಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಹೇಮಾವತಿ ಒಡಲಿನಲ್ಲಿ 17.802 ಟಿಸಿಎಂ ನೀರಿನ ಸಂಗ್ರಹವಿತ್ತು. ಇದರಲ್ಲಿ ಬಳಕೆಗೆ 13.440 ಟಿಎಂಸಿ ನೀರು ಲಭ್ಯವಿತ್ತು.
37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವುಳ್ಳ ಹೇಮಾವತಿ ಜಲಾಶಯ ಕಳೆದ ವರ್ಷ ತೀವ್ರ ಬರದಿಂದಾಗಿ ಒಂದು ಬಾರಿಯೂ ಸಂಪೂರ್ಣವಾಗಿ ಭರ್ತಿಯಾಗಿರಲಿಲ್ಲ. ನೀರಿನ ಒಳಹರಿವಿನ ಪ್ರಮಾಣ ಕೂಡ ತೀರಾ ಕಡಿಮೆಯಾಗಿತ್ತು. ಜಲಾಶಯ ನಿರೀಕ್ಷಿತ ಪ್ರಮಾಣದಲ್ಲಿ ತುಂಬದ ಕಾರಣ ಕುಡಿಯುವ ನೀರು, ಕೆರೆ-ಕಟ್ಟೆಗಳನ್ನು ತುಂಬಿಸುವುದನ್ನು ಹೊರತುಪಡಿಸಿ ಬೆಳೆ ಬೆಳೆಯಲು ನೀರನ್ನು ಸಹ ಕೊಡಲಾಗಿರಲಿಲ್ಲ. ಪ್ರಸ್ತುತ ಇರುವ 5 ಟಿಎಂಸಿ ನೀರು ಜುಲೈವರೆಗೂ ಕುಡಿಯಲು ಸಾಕಾಗುತ್ತದೆ ಎಂದು ಜಲಾಶಯದ ಇಂಜಿನಿಯರ್ ಹೇಳುತ್ತಾರೆ.
ಡ್ಯಾಂನಿಂದ ಪ್ರತಿನಿತ್ಯ 330 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಾರಣ ನದಿ ಬತ್ತದಂತೆ ಹಾಗೂ ಫ್ಲೋರಾ ಅಂದರೆ ನದಿಯಲ್ಲಿನ ಜಲಚರ ಪ್ರಾಣಿಗಳಿಗೆ, ಸಸ್ಯಗಳಿಗೆ ನೀರು ಒದಗಿಸುವ ಕಾರಣದದಿಂದ ನೀರು ಹರಿಸಲಾಗುತ್ತಿದೆ. ಈಗಾಗಲೇ ನಾಲೆಗಳ ಮೂಲಕ ಜಿಲ್ಲೆಯ ಚನ್ನರಾಯಪಟ್ಟಣ, ಹೊಳೆನರಸೀಪುರ ಹಾಗೂ ಅರಕಲಗೂಡು ಭಾಗದ ಕೆರೆ-ಕಟ್ಟೆಗಳಿಗೆ ನೀರು ಹರಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ನೀರು ಬಿಡದಿದ್ದರೂ ಆ ಭಾಗದ ಜಾನುವಾರು, ಪ್ರಾಣಿ-ಪಕ್ಷಿಗಳು ನೀರು ಕುಡಿಯುವಷ್ಟು ನೀರು ಬಿಡಲಾಗಿದೆ.
ತುಮಕೂರಿಗೆ ನೀರು:
ತೀವ್ರ ನೀರಿನ ಅಭಾವದ ನಡುವೆಯೂ ಮಾರ್ಚ್ ಮಧ್ಯದಲ್ಲಿ ತುಮಕೂರಿಗೆ ಎರಡು ಟಿಎಂಸಿ ನೀರನ್ನು ಹರಿಸಲಾಗಿತ್ತು. ನಾಲೆಗಳ ಮೇಲೆ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಿ ನೀರು ಹರಿಸುತ್ತಿರುವುದಕ್ಕೆ ಜಿಲ್ಲೆಯ ರೈತರು ಹಾಗೂ ಜೆಡಿಎಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು, ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ನೀರನ್ನು ಬಿಡಬೇಕೋ ಬೇಡವೋ ಎಂಬುದನ್ನು ನೀರಾವರಿ ಸಲಹಾ ಸಮಿತಿ ನಿರ್ಧರಿಸುತ್ತದೆ. ಸಮಿತಿಯ ಪೂರ್ವನಿರ್ಧಾರದಂತೆ ನೀರು ಹರಿಸಲಾಗಿದೆ ಎಂದು ಹೇಳಿದ್ದರು.
ಮೀನುಗಳ ಸಾವು:
ಯುಗಾದಿ ಕಳೆದ ನಂತರದ ವಾರದಲ್ಲಿ ಅಶ್ವಿನಿ ಹಾಗೂ ಭರಣಿ ನಕ್ಷತ್ರದ ಮಳೆಗಳು ನಾಲ್ಕೈದು ಬಾರಿಯಾದರೂ ಧಾರಾಕಾರವಾಗಿ ಸುರಿಯಬೇಕಿತ್ತು. ಆದರೆ, ಜಿಲ್ಲೆಯ ಒಂದು ಬಾರಿ ಬೇಸಿಗೆ ಮಳೆಯಾಗಿದ್ದು ಬಿಟ್ಟಿರೆ ಮತ್ತೆ ಯಾವುದೇ ಮಳೆಯಾಗಿಲ್ಲ. ಜಲಾಶಯದಲ್ಲಿ ಮಳೆ ಕೊರತೆಯಿಂದ ನೀರಿನ ಅಭಾವ ಸೃಷ್ಟಿಯಾಗಿದೆ. ಜತೆಗೆ ಬೇಸಿಗೆ ತೀವ್ರ ಬಿಸಿಲಿನಿಂದಲೂ ನೀರು ಆವಿಯಾಗುತ್ತಿದೆ. ಹೀಗಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ಬಿಸಿಲಿ ತೀವ್ರ ಬಿಸಿಲ ಝಳದಿಂದಾಗಿ ಹೇಮಾವತಿ ಜಲಾಶಯದಲ್ಲಿ ಸಾವಿರಾರು ಮೀನುಗಳು ಸತ್ತು ದಡದಲ್ಲಿ ತೇಲುತ್ತಿವೆ.
ಬೆಳೆಗೆ ನೀರು ಬಳಸದಂತೆ ಮನವಿ:
ನದಿ ಪಕ್ಕದಲ್ಲಿ ತೋಟ ಬೆಳೆದಿರುವ ರೈತರು ಯಂತ್ರಗಳ ಮೂಲಕ ನದಿಯಿಂದ ತೋಟಕ್ಕೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಆದರೆ, ಜಲಾಶಯದ ಅಧಿಕಾರಿಗಳು ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರನ್ನು ಬೆಳೆಗಳಿಗೆ ಬಳಸದಂತೆ ರೈತರಿಗೆ ಮನವಿ ಮಾಡಿದ್ದಾರೆ.
ಜಲಾಶಯದಲ್ಲಿ ಪ್ರಸ್ತುತ ಇರುವ ನೀರು ಮುಂದಿನ ಜುಲೈವರೆಗೂ ಕುಡಿಯಲು ಸಾಕಾಗುತ್ತದೆ ಎಂದು ನಿರೀಕ್ಷಿಸಿದ್ದೇವೆ. ಈಗಾಗಲೇ ಮೂರು ತಾಲೂಕಿನ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲಾಗಿದೆ. ಈಗ ನದಿಗೆ ಮಾತ್ರ ನೀರು ಹರಿಸುತ್ತಿದ್ದೇವೆ. ಬರದಿಂದಾಗಿ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗದ ಕಾರಣ ನಾವು ಈ ಬಾರಿ ಕುಡಿಯುವ ಉದ್ದೇಶಕ್ಕೆ ಮತ್ತು ಕರೆ-ಕಟ್ಟೆಗಳನ್ನು ತುಂಬಿಸಲು ಮಾತ್ರ ನೀರು ಹರಿಸಿದ್ದೇವೆ. ಬೆಳೆ ಬೆಳೆಯಲು ನೀರು ಕೊಡಲು ಸಾಧ್ಯವಾಗಲಿಲ್ಲ ಎಂದು ಹೇಮಾವತಿ ಜಲಾಶಯದ ಎಇಇ ಅರುಣ್ ತಿಳಿಸಿದರು.