ಬರಹಳ್ಳಕ್ಕೆ ಚೆಕ್‌ಡ್ಯಾಂ ನಿರ್ಮಾಣ

kdr check dam
ಬಿಸಿಲೆರೆ ಗ್ರಾಮದ ಬರಹಳ್ಳಕ್ಕೆ ಚೆಕ್‌ಡ್ಯಾಂ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ರೇಣುಕಮ್ಮ, ವಸಂತಕುಮಾರ್ ಮತ್ತು ಸದಸ್ಯರು ಇದ್ದರು.
Published on

ಕಡೂರು: ತಾಲೂಕನ್ನು ನೀರಾವರಿಯಿಂದ ಸಮೃದ್ಧಗೊಳಿಸಿ ಆ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿರುವ ರೈತರ ಬದುಕು ಹಸನಾಗಿಸುವುದು ನನ್ನ ಉದ್ದೇಶ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಬಿಸಿಲೆರೆ ಗ್ರಾಮದಲ್ಲಿ ಬುಧವಾರ ಬರಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಅಟಲ್ ಭೂ ಜಲ ಯೋಜನೆಯಡಿ 1 ಕೋಟಿ ರೂ. ವೆಚ್ಚದ ಚೆಕ್‌ಡ್ಯಾಂ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನನ್ನ ಶಾಸಕತ್ವದ ಎರಡು ವರ್ಷಗಳಲ್ಲಿ ಇದೂ ಸೇರಿ 16 ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಇತಿಹಾಸದಲ್ಲಿಯೇ ಮೊದಲು ಎನ್ನುವಂತೆ 50 ಕೋಟಿ ರೂ. ವೆಚ್ಚದಲ್ಲಿ ಮದಗದ ಕೆರೆಯ ರಾಯಗಾಲುವೆ, ಪಿಕಪ್ ಕಾಲುವೆಗಳು, ಮಡುಬಾಯಿಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ. ಭದ್ರಾ ಉಪಕಣಿವೆ ಯೋಜನೆಯ ಎರಡನೇ ಹಂತಕ್ಕೆ 400 ಕೋಟಿ ರೂ. ಮಂಜೂರು, ಮೂರನೇ ಹಂತಕ್ಕೆ ಟೆಂಡರ್ ಆಗಿದ್ದು 407 ಕೋಟಿ ರೂ. ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

ನಾನು ಭೇಟಿ ನೀಡಿದ ಎಲ್ಲ ಗ್ರಾಮಗಳಲ್ಲಿ ಗ್ರಾಮಸ್ಥರು ಮತ್ತು ರೈತರು ನೀರಾವರಿಗೆ ಒತ್ತು ಕೊಡುವಂತೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ತಾಲೂಕಿನ ಕೆರೆಗಳಿಗೆ ಭದ್ರಾ ಉಪಕಣಿವೆ ಯೋಜನೆಯಿಂದ ನೀರು ಹರಿದುಬರುವ ವಿಶ್ವಾಸವಿದೆ. ಈ ಚೆಕ್‌ಡ್ಯಾಂ ನಿರ್ಮಾಣ ಸಂದರ್ಭದಲ್ಲಿ ರೈತರು ಜಮೀನುಗಳಿಗೆ ತೆರಳಲು ಅಡ್ಡಿಯಾಗದಂತೆ ಬೊಮ್ಮಪ್ಪನ ಕಟ್ಟೆ ಬಳಿ ಸೇತುವೆ ನಿರ್ಮಿಸಿಕೊಡಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿತ್ತು. ಅದಕ್ಕಾಗಿ ಆರ್‌ಡಿಪಿಆರ್‌ಯಿಂದ 40 ಲಕ್ಷ ಹಣ ಮಂಜೂರು ಮಾಡಿಸಿದ್ದೇನೆ. ಚೆಕ್‌ಡ್ಯಾಂನಿಂದ ರೈತರಿಗೆ ಸಮಸ್ಯೆ ಆಗುವುದಾದರೆ ಅಲ್ಲಿಯೂ ಒಂದು ಸೇತುವೆ ನಿರ್ಮಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಸಣ್ಣ ನೀರಾವರಿ ಇಲಾಖೆ ಎಇಇ ದಕ್ಷಿಣಮೂರ್ತಿ ಮಾತನಾಡಿ, ಚೆಕ್‌ಡ್ಯಾಂ 25ರಿಂದ 28 ಮೀಟರ್ ಅಗಲ, 3 ಮೀಟರ್ ಆಳ ಮತ್ತು ಸುಮಾರು 650 ಮೀಟರ್ ಉದ್ದಕ್ಕೆ ಹಳ್ಳದಲ್ಲಿ ನೀರು ಸಂಗ್ರಹವಾಗಲಿದೆ ಎಂದರು.

ಗ್ರಾಮಸ್ಥರು ಬಿಸಿಲೆರೆ-ಅರೇಹಳ್ಳಿ ರಸ್ತೆ ದುರಸ್ತಿಗಾಗಿ ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷ ವಸಂತ ಕುಮಾರ್, ಸದಸ್ಯರಾದ ಸವಿತಾ, ಪ್ರಭುಕುಮಾರ, ರಾಜಪ್ಪ, ಗುರುಮೂರ್ತಿ, ಅರೇಹಳ್ಳಿ ಶಿವಕುಮಾರ್, ಸೋಮು, ನವೀನ್, ಮಲ್ಲಪ್ಪ, ತಿಮ್ಲಾಪುರ ದಿನೇಶ್, ಸೋಮಶೇಖರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net