

ರಾಯಚೂರು: ಬರಹಗಾರನಿಗೆ ತನ್ನ ನಿಲುವು ಗಟ್ಟಿಯಾಗಿದ್ದಾಗ ಮಾತ್ರ ಬರಹದಲ್ಲಿಯೂ ಗಟ್ಟಿತನವಿರುತ್ತದೆ. ಇನ್ನೊಬ್ಬರು ಹೇಳುತ್ತಾರೆ ಎನ್ನುವ ಕಾರಣ ತನ್ನ ಬರಹವನ್ನು ತಿದ್ದುವಂತಹ ಕೆಲಸ ಮಾಡಿದಾಗ ಬರಹಗಾರ ತನ್ನ ನಿಲುವಿಗೆ ಬದ್ಧನಾಗಿಲ್ಲವೆಂದು ಗೊತ್ತಾಗುತ್ತದೆ ಎಂದು ಹಿರಿಯ ಸಾಹಿತಿ ವೀರಹನುಮಾನ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಷೀರ ಅಹ್ಮದ್ ಹೊಸಮನಿಯವರ ಅರ್ಜುನಾಯಣ ಕಥನ ಕಾವ್ಯ ಸಂಪುಟ ಲೋಕಾರ್ಪಣೆಗೊಳಿಸಿ ಮಾತನಾಡಿ, ತಮ್ಮ ಬರಹದ ಬಗ್ಗೆ ಗಟ್ಟಿ ನಿಲುವು ಹೊಂದಿರುವ ಬಷೀರ್ ಅಹ್ಮದ್‌ರ ಕಥನ ಕಾವ್ಯದಲ್ಲಿ ಓದಿಸಿಕೊಂಡು ಹೋಗುವ ಶಕ್ತಿಯಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತಿಗಳ ಕೊರತೆಯಿಲ್ಲ. ಅನೇಕ ಯುವ ಸಾಹಿತಿಗಳು ಕೃತಿಗಳನ್ನು ಹೊರತರುತ್ತಿದ್ದಾರೆ. ಹಿರಿಯ ಸಾಹಿತಿಗಳು ಅವರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದ್ದಾರೆ. ಬಷೀರ್ ಅಹ್ಮದ್‌ರ ಕನ್ನಡ ಮೇಲಿನ ಪ್ರೀತಿ ಅತೀತವಾಗಿದೆ ಎಂದರು.
ಸಾಹಿತಿ ಈರಣ್ಣ ಬೆಂಗಾಲಿ ಮಾತನಾಡಿ, ಕನ್ನಡ ಸಾಹಿತ್ಯ ಲೋಕ ಸಂಪದ್ಭರಿತವಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ವಿಶೇಷವಾಗಿದ್ದು, ಹಿರಿಯರಿಂದ ಇಂದಿನ ಯುವ ಸಾಹಿತಿಗಳು ತಮ್ಮ ಗಟ್ಟಿತನದ ಬರವಣಿಗೆ ಮೂಲಕ ರಾಜ್ಯದ ಗಮನ ಸೆಳೆಯುತ್ತಿದ್ದಾರೆ.
ಕನ್ನಡ ಮಾತೃ ಭಾಷೆಯಲ್ಲದಿದ್ದರೂ ಕನ್ನಡವನ್ನು ಎದೆಯಲ್ಲಿ ತುಂಬಿಕೊಂಡವನ್ನು ನಾವು ಕಾಣುತ್ತೇವೆ. ಅಂತಹವರಲ್ಲಿ ಬಷೀರ್ ಅಹ್ಮದ್ ಕೂಡಾ ಒಬ್ಬರೂ ಎಂದುಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬಾಗಲಕೋಟೆಯ ಡಾ.ಮೈನುದ್ದೀನ್ ರೇವಡಿಗಾರ, ಹೊಸಪೇಟೆಯ ಲಿಯಾಖತ್ ಅಲಿ ಹೊಸಮನಿ, ಅಯ್ಯಪ್ಪಯ್ಯ ಹುಡಾ, ಬಷೀರ್ ಅಹ್ಮದ್ ಹೊಸಮನಿ, ಹೊಸಮನಿ ಪ್ರಕಾಶನ ಅಧ್ಯಕ್ಷೆ ಪರ್ವೀನ್‌ಬೇಗಂ ಉಪಸ್ಥಿತರಿದ್ದರು.