

ಸವದತ್ತಿ: ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸವದತ್ತಿ ಮತ್ತು ಯರಗಟ್ಟಿ ತಾಲೂಕುಗಳನ್ನು ಬರ ಪೀಡಿತ ಘೋಷಿಸಿ, ಬೆಳೆ ಹಾನಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರು ಮಾತನಾಡಿ, ಮಲಪ್ರಭಾ ನದಿ ತಟದಲ್ಲಿದ್ದರೂ ತಾಲೂಕಿನ ಬಹುತೇಕ ಗ್ರಾಮಗಳು ನೀರಾವರಿಯಿಂದ ವಂಚಿತವಾಗಿವೆ. ಇದೀಗ ಮಳೆ ಕೊರತೆಯಿಂದ ರೈತರ ಬೆಳೆಗಳೆಲ್ಲವೂ ಹಾನಿಗೀಡಾಗಿವೆ. ಸರ್ಕಾರ ಸಿದ್ಧಪಡಿಸಿರುವ ಪಟ್ಟಿಯಲ್ಲಿ ತಾಲೂಕನ್ನು ಕೈಬಿಟ್ಟು ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ರೈತ ಸಂಘದ ತಾಲೂಕಾಧ್ಯಕ್ಷ ಸುರೇಶ ಸಂಪಗಾವಿ ಮಾತನಾಡಿ, 64 ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಸವದತ್ತಿ ಮತ್ತು ಯರಗಟ್ಟಿ ಕೈಬಿಡಲಾಗಿದೆ. ರಾಜ್ಯ ಸರ್ಕಾರದ ವಿಪತ್ತು ನಿಧಿಯಿಂದ ಪ್ರತಿ ಎಕರೆಗೆ ಹತ್ತು ಸಾವಿರ ರೂ.ದಂತೆ ಬೆಳೆ ಹಾನಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಮಹಾಂತೇಶ ಮುತವಾಡ, ಅಲಿಸಾಬ್ ನೂಲಗಿ, ಶಂಕರ ಬಗನಾಳ, ಸಿಂಧೂರ ತೆಗ್ಗಿ, ಸಿದ್ದಪ್ಪ ಪಟ್ಟದಕಲ್ಲ, ಹನುಮಂತ ಹಾಸಟ್ಟಿ, ಸಿದ್ದಪ್ಪ ಚಂದರಗಿ, ಶೆಟ್ಟೆಪ್ಪ ಬಿರಾಜನವರ, ರಾಜಕುಮಾರ ಮಾಳಪ್ಪನವರ, ಫಕ್ಕೀರಪ್ಪ ಕಟ್ಟಿಮಳ್ಳಿ, ನಿಂಗಪ್ಪ ಗಡಾದ, ನಾಗಪ್ಪ ಯಮನೂರ, ಈರಪ್ಪ ಕಾಳಗಿ ಇತರರು ಇದ್ದರು.