ಬರಪೀಡಿತ ತಾಲೂಕು ಘೋಷಣೆಗೆ ಒತ್ತಾಯ

mkg1b
Published on

ಹೊನ್ನಾಳಿ: ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಮುಂಗಾರು ಕೈಕೊಟ್ಟಿರುವುದರಿಂದ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಸಿಎಂ, ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇನೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ ಮಳೆ ಬಾರದೆ ಒಣಗಿರುವ ಜಮೀನುಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅವಳಿ ತಾಲೂಕಿನ 70 ಸಾವಿರ ಎಕರೆ ಪ್ರದೇಶದಲ್ಲಿ ಶೇ. 90ರಷ್ಟು ಮೆಕ್ಕೆಜೋಳ, ಊಟದ ಜೋಳ, ಹತ್ತಿ, ಶೇಂಗಾ ಹಾಗೂ ತೋಟಗಾರಿಕೆ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಕೂಡಲೆ ಬರಪೀಡಿತ ಎಂದು ಘೋಷಣೆ ಮಾಡಿ ಬರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದೇನೆ ಎಂದರು.

ನಾನು ಬಿಜೆಪಿ ನಿಷ್ಟಾವಂತ ಕಾರ್ಯಕರ್ತ. ನಾನು ಲೋಕಸಭೆ ಚುನಾವಣೆಗೆ ಟಿಕೆಟ್ ಕೇಳಿದರೆ ಏನು ತಪ್ಪು? ದಾವಣಗೆರೆ ಜಿಲ್ಲೆಯ ಹಲವು ತಾಲೂಕುಗಳಿಂದ ಪಕ್ಷದ ಕಾರ್ಯಕರ್ತರು ಲೋಕಸಭೆಗೆ ನಿಲ್ಲಿ ಎಂದು ಒತ್ತಾಯ ಮಾಡುತ್ತಿದ್ದಾರೆ, ಪಕ್ಷದ ಮುಖಂಡರು ಟಿಕೆಟ್ ನೀಡುತ್ತಾರೆ ಎಂಬ ಭರವಸೆ ಇದೆ ಎಂದರು.

ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net