

ಕಮಲನಗರ: ತಾಲೂಕು ಬರಪೀಡಿತವೆಂದು ಘೋಷಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಸಂಘದ ಪ್ರಮುಖರು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಪ್ರವೀಣ ಕುಲಕರ್ಣಿ ನೇತೃತ್ವದಲ್ಲಿ ರೈತ ಮುಖಂಡರು ಮಂಗಳವಾರ ಡಾ.ಚನ್ನಬಸವ ಪಟ್ಟದ್ದೇವರು ವಾಚನಾಲಯದಿಂದ ಅಲ್ಲಮಪ್ರಭು ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರ ತಹಸೀಲ್ದಾರ್‌ಗೆ ಸಲ್ಲಿಸಿದರು.
ಸೂಕ್ತ ಮಳೆಯಾಗದ ಕಾರಣ ತಾಲೂಕಿನಲ್ಲಿ ಮುಂಗಾರು ಬಿತ್ತನೆ ಬೆಳೆಗಳಾದ ಹೆಸರು, ಉದ್ದು, ತೊಗರಿ, ಸೋಯಾಬಿನ್ ಸೇರಿ ಇತರೆ ಬೆಳೆ ನಾಶವಾಗಿವೆ. ಕಮಲನರ ತಾಲೂಕು ಸಂಪೂರ್ಣ ಬರ ಪೀಡಿತ ಎಂದು ಘೋಷಿಸಿ, ಎಕರೆಗೆ ರೂ.೫೦ ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬೆಳೆ ವಿಮೆ ಕಟ್ಟಿದ ರೈತರಿಗೆ ವಿಮೆ ಕಂಪನಿಯಿಂದ ಹಣ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ಕಬ್ಬಿಗೆ ದರ ನಿಗದಿಪಡಿಸಿದಂತೆ ರಾಜ್ಯ ಸರ್ಕಾರ ಪ್ರತಿ ಟನ್‌ಗೆ ರೂ.೫೦೦ ನೀಡಬೇಕು. ರೈತರ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಒದಗಿಸಬೇಕು. ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ರೈತರ ಹೊಲಗಳಿಗೆ ರಸ್ತೆ ನಿರ್ಮಿಸಬೇಕು. ಕಾಡು ಪ್ರಾಣಿಗಳಿಂದ ರೈತರ ಬೆಳೆ ರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಅಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ವೈಜನಾಥ ವಡ್ಡೆ, ಪ್ರಕಾಶ ಬಾವಗೆ, ವಿಜಯಕುಮಾರ ಪಾಟೀಲ್, ಉತ್ತಮರಾವ ಮಾನೆ, ವಿಠ್ಠಲರಾವ ಪಾಟೀಲ್, ಬಸವರಾಜ ಬಿರಾದಾರ, ವೀರಭದ್ರ ಹಲ್ಮಂಡಗೆ, ಮಲ್ಲಿಕಾರ್ಜುನ ಬಿರಾದಾರ, ವೈಜನಾಥ ಮೇತ್ರೆ, ವಿಶ್ವನಾಥ ಧರಣೆ, ರಾಜಕುಮಾರ ಬಿರಾದಾರ ಇತರರಿದ್ದರು.