ಬರಡು ಭೂಮಿಯಲ್ಲಿ ಸಸ್ಯರಾಶಿ ಸೃಷ್ಟಿ

9 mlv 7
Published on

ಮಳವಳ್ಳಿ: ತಾಲೂಕಿನ ಮುಟ್ಟನಹಳ್ಳಿ ಗ್ರಾಮದ ರೈತ ಅಮೃತಕಂಠೇಶ್ ಬರಡು ಭೂಮಿಯಲ್ಲಿ ಅರಣ್ಯೀಕರಣದ ಜತೆಗೆ ನೈಸರ್ಗಿಕ ಕೃಷಿಯಲ್ಲಿ ಬಹುಬೆಳೆ ಪದ್ಧತಿ ಅನುಸರಿಸಿಕೊಂಡು ತಮ್ಮ ತೋಟದಲ್ಲಿ ಸಸ್ಯಕಾಶಿಯನ್ನೇ ನಿರ್ಮಾಣ ಮಾಡಿಕೊಂಡು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ.

ಪ್ರಸ್ತುತ ಬಹುಪಾಲು ರೈತರು ರಾಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡಿದೆ. ಯಾವುದೇ ಬೆಳೆಯೂ ಕ್ರಿಮಿನಾಶಕ ಹಾಗೂ ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ಫಸಲು ಕಾಣಲು ಸಾಧ್ಯವಿಲ್ಲವೆಂಬ ಮಟ್ಟಕ್ಕೆ ರೈತರು ಬಂದಿದ್ದಾರೆ. ಆದರೆ ನೈಸರ್ಗಿಕ ಗೊಬ್ಬರವನ್ನು ಮಣ್ಣಿಗೆ ಹಾಕಿ, ನೀರುಣಿಸಿ ಫಲವತ್ತಾದ ಬೆಳೆ ಬೆಳೆಯುತ್ತಿರುವ ಅಮೃತಕಂಠೇಶ್ ಮಾದರಿಯಾಗಿದ್ದಾರೆ. ಇವರ ತೋಟಕ್ಕೆ ರಾಸಾಯನಿಕ ಗೊಬ್ಬರ ಕಂಪನಿಗಳ ಪ್ರಚಾರಕರು ಬಂದು ಉತ್ತಮ ಇಳುವರಿಯ ಪ್ರಚೋದನೆ ನೀಡಿದ್ದರೂ ನಯವಾಗಿ ತಿರಸ್ಕರಿಸುವ ಮೂಲಕ ಯಾವುದೇ ಕ್ರಿಮಿನಾಶಕ ಹಾಗೂ ರಸಗೊಬ್ಬರವನ್ನು ತಮ್ಮ ಜಮೀನಿಗೆ ತಾಗದಂತೆ ನೋಡಿಕೊಂಡಿದ್ದಾರೆ.

ಏಳು ಎಕರೆ ಜಮೀನು ಎತ್ತನೋಡಿದರೂ ಮರಗಿಡಗಳಿಂದ ಕೂಡಿದ್ದು, ತೆಂಗು, ಅಡಕೆ, ಹಲಸು, ಬಾಳೆ, ಸೀಬೆ, ಮಾವು, ಚಕೋತಾ, ಕಿತ್ತಳೆ, ಚರಿ, ರಾಮ್ ಬೋಟೀಸ್, ಶಿಮ್ಲಾ ಹ್ಯಾಪಲ್, ಕೋಕೋ, ಬೆಣ್ಣೆ ಹಣ್ಣು, ಮ್ಯಾಂಗೋಸ್ಟಿವ್, ಮೆಣಸು, ಏಲಕ್ಕಿ ಮಲೆನಾಡ ಬೆಳೆಗಳನ್ನೂ ಇವರ ತೋಟದಲ್ಲಿ ಕಾಣಬಹುದು. ರೈತರಿಗೆ ಜಾಗೃತಿ ಮೂಡಿಸಲು ನಗರ ಪ್ರದೇಶಗಳಲ್ಲಿ ಕೃಷಿ ಇಲಾಖೆಗಳು ಹಮ್ಮಿಕೊಳ್ಳುವ ಸಸ್ಯ ಪ್ರದರ್ಶನಗಳಿಗೆ ಹೋಗುವ ಅಮೃತಕಂಠೇಶ್ ಅಪರೂಪದ ತಳಿಗಳನ್ನು ತಂದು ತಮ್ಮ ತೋಟದಲ್ಲಿ ನೆಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಆದ್ದರಿಂದ ಇವರ ತೋಟದಲ್ಲಿ ಸ್ಥಳೀಯ ರೈತರಿಗೆ ಪರಿಚಯವಿಲ್ಲದ ಹಣ್ಣಿನ ಸಸಿಗಳು ಬೆಳೆದಿದ್ದು, ಇವುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.

ಕೃಷಿ ಇಲಾಖೆಯಲ್ಲಿ ದೊರೆಯುವ ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಂಡು ಮನೆ ನಿರ್ಮಾಣ ಹಾಗೂ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಮೇಕೆ, ನಾಟಿ ಕೋಳಿ, ಹಸುಗಳನ್ನು ಸಾಕಿದ್ದಾರೆ. ಜತೆಗೆ ಜೇನು ಸಾಕಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಸಾಕುಪ್ರಾಣಿಗಳ ಸಗಣಿ ಹಾಗೂ ತ್ಯಾಜ್ಯ ಬೆಳೆಗಳ ಫಲವತ್ತತೆಗೆ ಉತ್ತಮ ಗೊಬ್ಬರವಾದರೆ, ಗೋಮೂತ್ರ ಶೇಖರಿಸಿ ಜೀವಾಮೃತ ತಯಾರಿಸಿ, ತೋಟದ ಗಿಡಗಳಿಗೆ ಹಾಕುತ್ತಾರೆ. ಇದರ ನಿರ್ವಹಣೆಗಾಗಿ ಒಂದು ಕುಟುಂಬವನ್ನು ತೋಟದಲ್ಲೇ ಇರಿಸಿದ್ದು, ಹೆಚ್ಚಿನ ಕೂಲಿ ಆಳುಗಳನ್ನು ಅವಲಂಬಿಸಿಲ್ಲ. ಹತ್ತು ವರ್ಷದ ಹಿಂದೆ ಬರಡಾಗಿದ್ದ ಭೂಮಿಯಲ್ಲಿ ಆಸಕ್ತಿಯಿಂದ ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಅಮೃತಕಂಠೇಶ್ ಅವರಿಗೆ ವಿವಿಧ ಬೆಳೆಗಳಿಂದ ಲಕ್ಷಾಂತರ ರೂ. ಆದಾಯ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net